Advertisement

ಸಿರಿಧಾನ್ಯಉಪಯೋಗ ತಿಳಿಸಿದ ಗೌಡರು

12:47 PM May 27, 2017 | Team Udayavani |

ಬೆಂಗಳೂರು: ಕಾಯಿಲೆಗಳಿಂದ ಮುಕ್ತವಾಗಲು ಬಯಸುವವರು ಸಿರಿಧಾನ್ಯಗಳನ್ನು ಸೇವಿಸಬೇಕು. ಎಲ್ಲ ರೋಗಗಳಿಗೂ ಸಿರಿಧಾನ್ಯಗಳಲ್ಲಿ ಔಷಧವಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡ ತಿಳಿಸಿದರು. ಲಾಲ್‌ ಬಾಗ್‌ನಲ್ಲಿ “ಗ್ರಾಮೀಣ ಕುಟುಂಬ’ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ “ಸಿರಿಧಾನ್ಯ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

Advertisement

“ಪ್ರಸ್ತುತ ರಾಗಿ ಕೇವಲ ಹಳ್ಳಿಗರ ಆಹಾರ ಪದಾರ್ಥವಾಗಿ ಉಳಿದಿಲ್ಲ. ನಗರವಾಸಿಗಳು ಕೂಡ ರಾಗಿಯೆಡೆಗೆ ಮುಖ ಮಾಡಿದ್ದಾರೆ. ನಾನು ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ಇಡೀ ದೇಶಕ್ಕೆ ಸಿರಿಧಾನ್ಯಗಳ ಬಳಕೆಗೆ ಉತ್ತೇಜನ ನೀಡಿದ್ದೆ” ಎಂದರು. 

“ಸಿರಿಧಾನ್ಯ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಕಾರಿ. ರಾಗಿ ಮುದ್ದೆ, ರಾಗಿ ರೊಟ್ಟಿ ತಿನ್ನುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎನ್ನುವುದಕ್ಕೆ ನಾನೇ ಮಾದರಿ. ಸಿರಿಧಾನ್ಯಗಳನ್ನು ನಮ್ಮ ರೈತರಿಂದ ಬೆಳೆಸಲು ಸಾಧ್ಯವೇ ಎಂಬುದರ ಬಗ್ಗೆ ಯೋಚಿಸಬೇಕಿದೆ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು,’ ಎಂದು ಹೇಳಿದರು. 

“ಗ್ರಾಮೀಣ ಕುಟುಂಬ’ ಸಂಸ್ಥೆಯ ಅಧ್ಯಕ್ಷ ಎಂ.ಎಚ್‌ ಶ್ರೀಧರಮೂರ್ತಿ ಮಾತನಾಡಿ, “ಮಧ್ಯಮ ವರ್ಗದವರಿಗೆ, ಬಡವರಿಗೆ ಕೈಗೆಟಕುವ ದರದಲ್ಲಿ ಸಿರಿಧಾನ್ಯಗಳು ದೊರೆಯ ಬೇಕು ಎಂಬ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ರಾಜ್ಯದಲ್ಲಿ ಬೇಡಿಕೆಗನುಗುಣವಾಗಿ ಸಿರಿಧಾನ್ಯ ಪೂರೈಕೆಯಾಗುತ್ತಿಲ್ಲ. ಹಾಗಾಗಿ ತಮಿಳುನಾಡು, ಆಂಧ್ರ, ಮಹಾರಾಷ್ಟ್ರದಿಂದ ಸಿರಿಧಾನ್ಯಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈ ಬಾರಿ 100 ಟನ್‌ ಸಿರಿಧಾನ್ಯಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನವೆ 10 ಟನ್‌ ಸಿರಿಧಾನ್ಯ ಮಾರಾಟವಾಗಿದೆ,’ ಎಂದರು. 

ಕಾರ್ಯಕ್ರಮದಲ್ಲಿ ಪರಿಸರವಾದಿ ಡಾ.ಯಲ್ಲಪ್ಪರೆಡ್ಡಿ , ತೋಟಗಾರಿಕೆ ಆಯುಕ್ತ ಪ್ರಭಾಸ್‌ಚಂದ್ರ ರೇ, ಹೈದರಾಬಾದ್‌ನ ಐಐಎಂಆರ್‌ ನಿರ್ದೇಶಕ ಡಾ.ವಿಲಾಸ್‌ ಎ.ಥೋಣಪಿ, ಪತ್ರಕರ್ತ ಬಿ.ಎಂ.ಹನೀಫ್, ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ತೋಟಗಾರಿಕೆ ಇಲಾಖೆ ಜಂಟಿ ಆಯುಕ್ತ ಡಾ.ಜಗದೀಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಮೇಳದಲ್ಲಿ ಲಭ್ಯವಿರುವ ಪದಾರ್ಥ
1 ಕೆಜಿ ಮತ್ತು ಅರ್ಧ ಕೆಜಿ ಕಾಂಬೋ ಪ್ಯಾಕ್‌ (ಸಿರಿಧಾನ್ಯ ಅಕ್ಕಿ, ರವೆ ಹಾಗೂ ಹಿಟ್ಟು)ನಲ್ಲಿ ನವಣೆ, ಸಾಮೆ, ಆರ್ಕಾ, ಊದಲು, ಬರಗು ಧನ್ಯಗಳು ಪ್ರತ್ಯೇಕ ಪ್ಯಾಕಿಟ್‌ನಲ್ಲಿ ಸಿಗಲಿವೆ. ಜತೆಗೆ ಸಿರಿಧಾನ್ಯ ಅಡುಗೆ ಪುಸ್ತಕ ಹಾಗೂ ಕಾಟನ್‌ ಬ್ಯಾಗ್‌ ಉಚಿತವಾಗಿ ಸಿಗಲಿದೆ. 1 ಕೆಜಿ ಕಾಂಬೊ ಪ್ಯಾಕ್‌ಗೆ 410 ರೂ.ಗಳು ಹಾಗೂ ಅರ್ಧ ಕೆಜಿ ಕಾಂಬೋ ಪ್ಯಾಕ್‌ಗೆ 210 ರೂ. ನಿಗದಿಪಡಿಸಲಾಗಿದೆ.

ಅಲ್ಲದೇ 10 ಕೆಜಿ, 25 ಕೆಜಿ, 50 ಕೆಜಿ, 100 ಕೆಜಿಗೂ ಮೇಲ್ಪಟ್ಟು ಸಿರಿಧಾನ್ಯ ಸಗಟು ಮಾರಾಟವು ಇದೆ. ರೈತರಿಗಾಗಿ 5 ಟನ್‌ ಸಿರಿಧಾನ್ಯ ಬಿತ್ತನೆ ಬಿಜ ಹಾಗೂ ಎಲ್ಲ ಬಗೆಯ ನಾಟಿ ಬಿತ್ತನೆ ಬೀಜಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಸಿಹಿತಿಂಡಿಗಳು, ಕಾಡು ಜೇನು ತುಪ್ಪ, ಎಣ್ಣೆ, ಕಾಳುಗಳು, ಸಾವಯವ ಬೆಲ್ಲ, ಸಕ್ಕರೆ, ತಾಳೆ ಸಕ್ಕರೆ, ಮಸಾಲೆ ಪದಾರ್ಥಗಳು, ಟೀ, ಕಾಫಿ, ಪಾನಿಗಳು, ನೈಸರ್ಗಿಕ ಸಾವಯವ ತಾಜಾ ಕೃಷಿ ಉತ್ಪನ್ನಗಳು, ದಿನಸಿ, ಡೈರಿ ಉತ್ಪನ್ನಗಳು ಈ ಮೇಳದಲ್ಲಿ ಲಭ್ಯವಿದೆ. 

ಪ್ರಶಸ್ತಿ ಪುರಸ್ಕೃತರು
ಸಿರಿಧಾನ್ಯ ಬೆಳಗಾರರಾದ ಶಿವಳ್ಳಿ ಬೋರೆಗೌಡ, ಬಿ.ನಾಗರಾಜು, ತುಮಕೂರಿನ ರಘು, ಹಾವೇರಿ ಜಿಲ್ಲೆಯ ಚಂದ್ರಕಾಂತ ಸಂಗೂರು, ಧಾರವಾಡದ ಎಲ್ಲಪ್ಪ ರಾಮೋಜಿ, ತಮಿಳುನಾಡಿನ ದೀಪನ್‌, ಶಿವಗಂಗಾ ಸಾವಯವ ತರಕಾರಿ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಜಿ.ಹನುಮಂತರಾಜು, ಬೆಂಗಳೂರಿನ ಸಿರಿಧಾನ್ಯ ಆಹಾರ ತಯಾರಕ ಸಂಪತ್‌ ಕುಮಾರ್‌ ಭಟ್‌, ಬೆಂಗಳೂರಿನ ಸಿರಿಧಾನ್ಯ ಪ್ರಚಾರಕಿ ಎಂ.ಬಿ ನಂದಿನಿ ಅವರಿಗೆ 2017ನೇ ಸಾಲಿನ “ಗ್ರಾಮೀಣ ಕುಟುಂಬ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ಲಾಸ್ಟಿಕ್‌ ಕವರ್‌ಗೆ ಪ್ರವೇಶವಿಲ್ಲ 
ಲಾಲ್‌ಬಾಗ್‌ನ ಡಾ.ಮರಿಗೌಡ ಸ್ಮಾರಕ ಭವನದಲ್ಲಿ  ಮೇ 26ರಿಂದ 29ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಸಿರಿಧಾನ್ಯ ಮೇಳ ನಡೆಯಲಿದೆ. ಮೇಳದಲ್ಲಿ ಪ್ಲಾಸ್ಟಿಕ್‌ ಕ್ಯಾರಿಕವರ್‌ಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಗ್ರಾಹಕರು ಕೈಚೀಲದೊಂದಿಗೆ ಬರುವಂತೆ “ಗ್ರಾಮೀಣ ಕುಟುಂಬ’ ಅಧ್ಯಕ್ಷ ಶ್ರೀಧರ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next