Advertisement

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

08:48 PM Feb 28, 2021 | Team Udayavani |

ಚಾಮರಾಜನಗರ: ರಾಜ್ಯ ಸರ್ಕಾರ ಹಳೆಯ ಮೈಸೂರು ಪ್ರಾಂತ್ಯದಲ್ಲಿರುವ ಗೌಡ ಲಿಂಗಾಯತ, ಒಕ್ಕಲಿಗ ಲಿಂಗಾಯತ, ಪಂಚಮಸಾಲಿ ಲಿಂಗಾಯತ ಸಮುದಾಯಗಳನ್ನು ಪ್ರವರ್ಗ2 ಎಗೆ ಸೇರಿಸಬೇಕೆಂದು ಒತ್ತಾಯಿಸಿ ಶೀಘ್ರವೇ ಬೆಂಗಳೂರು ಚಲೋ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

Advertisement

ತಾಲೂಕಿನ ಸಂತೆಮರಹಳ್ಳಿಯಲ್ಲಿರುವ ಕಲ್ಯಾಣಮಂಟಪದಲ್ಲಿ, ಭಾನುವಾರ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ನೇತೃತ್ವದಲ್ಲಿ ನಡೆದ 2ಎ ಮೀಸಲಾತಿಗಾಗಿ ಗೌಡ ಲಿಂಗಾಯತರ ಪೂರ್ವಭಾವಿ ಸಭೆಯಲ್ಲಿ ಬೆಂಗಳೂರು ಚಲೋ ಸೇರಿದಂತೆ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆ ಆರಂಭದಲ್ಲಿ ಅನೇಕ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಪಂಚಮಸಾಲಿ ಸಮುದಾಯದ ಶ್ರೀಗಳು ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದರು. 780 ಕಿ.ಮೀ ಪಾದಯಾತ್ರೆ ಮತ್ತು ಹೋರಾಟದ ನೇತೃತ್ವ ವಹಿಸಿರುವ ಸ್ವಾಮಿಗಳ ಕಾರ್ಯವನ್ನು ಶ್ಲಾಸಿದರು. ಹಳೇ ಮೈಸೂರು ಪ್ರಾಂತ್ಯದಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಗೌಡ ಲಿಂಗಾಯತ, ಒಕ್ಕಲಿಗ ಲಿಂಗಾಯತ ಸಮುದಾಯದವರು ಇದ್ದಾರೆ. ಈ ಸಮುದಾಯಕ್ಕೆ 2ಎ ಕೊಡಿಸಲು ಈ ಭಾಗದ ಸ್ವಾಮೀಜಿಗಳು ಸಹ ನೇತೃತ್ವ ವಹಿಸಬೇಕು ಎಂಬ ಒತ್ತಾಯಗಳು ಸಭೆಯಲ್ಲಿ ಕೇಳಿ ಬಂದವು.

ಇದನ್ನೂ ಓದಿ :ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್

ಜಿಲ್ಲೆಯ ಐದು ತಾಲೂಕಗಳಲ್ಲಿಯೂ ವೀರಶೈವ ಲಿಂಗಾಯತ ಮುಖಂಡರ ಸಭೆಗಳನ್ನು ನಡೆಸಿ, ಜಾಗೃತಿ ಮೂಡಿಸುವ ಜೊತೆಗೆ ಆಯಾ ಭಾಗದಲ್ಲಿರುವ ಮಠಾಧೀಶರು ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಬೇಕು. ಅಂತಿಮವಾಗಿ ಸಮಿತಿಯನ್ನು ರಚನೆ ಮಾಡಿಕೊಂಡು, ಸಂಘಟನೆಯನ್ನು ಬಲಿಷ್ಠಗೊಳಿಸಲು ಶ್ರಮ ವಹಿಸಬೇಕು ಎಂದು ತಿಳಿಸಲಾಯಿತು.

Advertisement

ನಂತರ ಈ ಭಾಗದ ಪ್ರಭಾವಿ ಮಠಾಧೀಶರಾದ ಸುತ್ತೂರುಶ್ರಿಗಳು ಹಾಗೂ ಸಿದ್ದಗಂಗಾಶ್ರಿಗಳನ್ನು ಭೇಟಿ ಮಾಡಿ, 2ಎ ಮೀಸಲಾತಿ ಕೊಡಿಸುವಂತೆ ಮನವಿ ಮಾಡಿಕೊಂಡು ಅವರ ನೇತೃತ್ವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರು ಚಲೋ ಮಾಡಲು ಸಭೆಯಲ್ಲಿ ನಿರ್ಣಯಕೊಳ್ಳಲಾಯಿತು.

ರೈತ ಮುಖಂಡ ಮಲ್ಲೇಶ್ ಮಾತನಾಡಿ, ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತರು ಗೌಡ ಲಿಂಗಾಯತ ಒಕ್ಕಲಿಗ ಲಿಂಗಾಯತ, ಪಂಚಮಸಾಲಿ ಎಂಬ ಪದಗಳು ಒಂದೇ ಸಮಾನಾರ್ಥ ಪದಗಳಾಗಿವೆ. ಈಗಾಗಲೇ ಪಂಚಮಸಾಲಿ ಲಿಂಗಾಯತರ ಹೋರಾಟ ತೀವ್ರವಾಗಿದೆ. ಅದೇ ಮಾದರಿಯಲ್ಲಿ ಹಳೇ ಮೈಸೂರು ಪ್ರಾಂತ್ಯದ ಗೌಡ ಲಿಂಗಾಯತರು ಹೋರಾಟ ಮಾಡಿ ಮೀಸಲಾತಿ ಪಡೆದುಕೊಳ್ಳಬೇಕಾಗಿದೆ. ನಮ್ಮ ಹೋರಾಟದ ಕಾವು ರಾಜಧಾನಿಗೆ ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ ಸಮುದಾಯದವರು ಸಂಘಟಿತರಾಗಿ ನಮ್ಮ ಹಕ್ಕು ಕೇಳಬೇಕಾಗಿದೆ. ನಮ್ಮ ಹೋರಾಟ 2ಎಗೆ ಸೇರಿಸುವವರೆಗೆ ನಿರಂತರವಾಗಿರುತ್ತದೆ. ಇದು ಯಾವುದೇ ರಾಜಕೀಯ ಪಕ್ಷದ ವಿರುದ್ದ ಹೋರಾಟವಲ್ಲ. ನಮ್ಮ ಮುಂದಿನ ಪೀಳಿಗೆಗೆ ಈ ಹೋರಾಟ ಅನಿವಾರ್ಯವಾಗಿದೆ. ಇದಕ್ಕೆ ಸಮುದಾಯ ಸಹಕಾರ ಅಗತ್ಯ ಎಂದರು.

ಇದನ್ನೂ ಓದಿ:ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

ಇದಲ್ಲದೇ, ಒಟ್ಟಾರೆ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಗೆ ಸೇರಿಸಬೇಕು.
ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಕೋಡಸೋಗೆ ಶಿವಬಸಪ್ಪ, ಅಧ್ಯಕ್ಷ ಮೂಡ್ಲುಪುರ ನಂದೀಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಉಡಿಗಾಲ ಪಾಪಣ್ಣ, ಗ್ರಾ.ಪಂ. ಅಧ್ಯಕ್ಷ ಎಂ.ಪಿ.ಶಂಕರ್, ಉದ್ಯಮಿ ಎಚ್.ಜಿ. ಮಹದೇವಪ್ರಸಾದ್, ಶಿವಪುರ ಸುರೇಶ್, ಬಂಡಹಳ್ಳಿ ಶಿವಕುಮಾರ್, ಡಾ. ಪರಮೇಶ್ವರಪ್ಪ, ಕೊತ್ತಲವಾಡಿ ಕುಮಾರ್, ಕಾವುದವಾಡಿ ಗುರು, ಅರಕವಾಡಿ ಮಹೇಶ್, ಕಮಲೇಶ್, ಅಲೂರು ಪ್ರದೀಪ್, ರಮೇಶ್‌ಬಾಬು, ಎನ್.ಆರ್. ಪುರುಷೋತ್ತಮ್, ಮರಹಳ್ಳಿ ರಾಜು, ಮಹದೇವಸ್ವಾಮಿ, ಶಿವಶಂಕರ್, ದುಗ್ಗಟ್ಟಿ ಶಿವಕುಮಾರ್, ಎಂ.ಪಿ. ಬಸವಣ್ಣ, ನಟರಾಜು, ಸುಭಾಷ್ ಭಾಗವಹಿಸಿದ್ದರು.

ಗೌಡ ಲಿಂಗಾಯತರ ಆಲಸ್ಯ ಕಾರಣ
ಚಾಮರಾಜನಗರ: ಗೌಡ ಲಿಂಗಾಯತ ಸಮುದಾಯವು, ಕುಂಭಕರ್ಣನ ನಿದ್ದೆಯಿಂದ ಎದ್ದು ಬಂದು ತಮಗೆ ಸಿಗಬೇಕಾದ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗಿದೆ ಎಂದು ಅಮ್ಮನಪುರ ಮಲ್ಲೇಶ್ ಹೇಳಿದರು.

ಗೌಡ ಲಿಂಗಾಯತ ಸಮುದಾಯದಿಂದ ಐಎಎಸ್, ಐಪಿಎಸ್ ಅಧಿಕಾರಿಗಳಾಗಿಲ್ಲ. ನಿಗಮ ಮಂಡಳಿಗಳ ಅಧ್ಯಕ್ಷರಿಲ್ಲ, ಸಚಿವ, ಸಂಸದರಿಲ್ಲ. ಇದಕ್ಕೆಲ್ಲ ಕಾರಣ ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಹಾಗೂ ಗೌಡ ಲಿಂಗಾಯತರ ಆಲಸ್ಯ ಮನೋಭಾವ ಎಂದು ಅವರು ಹೇಳಿದರು.

ಹಳೆ ಮೈಸೂರು ಭಾಗದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸಭೆ ನಡೆಸಿ, ಒಟ್ಟಾರೆ ನಿರ್ಣಯಗಳನ್ನು ಕೈಗೊಂಡು, ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗುವುದು. ಬೆಂಗಳೂರಿಗೆ, ಪಾದಯಾತ್ರೆ ಅಥವಾ ಬಸ್‌ಗಳಲ್ಲಿ ತೆರಳಿ, ಧರಣಿ, ಉಪವಾಸ ಸತ್ಯಾಗ್ರಹ ಅಥವಾ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಬಗ್ಗೆ ಎಲ್ಲ ಜಿಲ್ಲಾ ಕೇಂದ್ರಗಳ ಗೌಡ ಲಿಂಗಾಯತರ ಪ್ರಮುಖರ ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ ಎಂದು ಮಲ್ಲೇಶ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next