ಪಿರಿಯಾಪಟ್ಟಣ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಜನ ವಿರೋಧಿ ನೀತಿ ಅನುಸರಿಸುತ್ತಿದ್ದು ಈ ಅವ್ಯವಸ್ಥೆಯನ್ನು ಖಂಡಿಸಿ ಹೋರಾಟ ಮಾಡಿದ ಫಲವಾಗಿ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆದೇಶ ಹೊರಡಿಸಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಪಟ್ಟಣದ ಹರವೆ ಮಲ್ಲರಾಜ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ರೈತ ಸಂಘ ಸ್ಥಾಪನೆಯಾಗಿ 40 ವರ್ಷ ಕಳೆದರೂ ಅಂದಿನ ಹೋರಾಟ ಹಾಗೂ ಸಿದ್ಧಾಂತಗಳು ಇಂದಿಗೂ ಕೂಡ ಅನಿವಾರ್ಯವಾಗಿದೆ. ರೈತರ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಬಯಸದ ವ್ಯಕ್ತಿಗಳು ಇಂದು ಆಡಳಿತದಲ್ಲಿರುವುದರಿಂದ ಪ್ರತಿಯೊಬ್ಬರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಜನತೆ ಅರ್ಥೈಸಿಕೊಂಡು ಹೋರಾಟ ಮಾಡಬೇಕಿದೆ. ರೈತ ಸಮುದಾಯ ಒಗ್ಗಟ್ಟಾಗಿದ್ದರೆ ಆಡಳಿತ ಮತ್ತು ಅಧಿಕಾರ ಹಿಡಿಯಲು ಸಾಧ್ಯ. ಇದನ್ನು ಅರ್ಥ ಮಾಡಿಕೊಂಡರೆ ರೈತ ಈ ದೇಶದ ಯಜಮಾನನಾಗುತ್ತಾನೆ. ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲ, ಸಕಾಲಕ್ಕೆ ಸಾಲ ಸಿಗುತ್ತಿಲ್ಲ, ಸರ್ಕಾರಗಳು ನೆಪಮಾತ್ರಕ್ಕೆ ಅವೈಜ್ಞಾನಿಕ ನಿಯಮಗಳನ್ನು ಸಾರ್ವಜನಿಕರ ಮೇಲೆ ಹೇರುವುದರ ಮೂಲಕ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡುತ್ತಿದ್ದಾರೆ. ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವ ರಾಷ್ಟ್ರಗಳಲ್ಲಿ 103 ಸ್ಥಾನದಲ್ಲಿದ್ದು, ಈಗಾಗಲೇ 5 ವರ್ಷಗಳಲ್ಲಿ ಶೇ 37 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘವು ಒಂದು ವರ್ಷಗಳ ಕಾಲ ಚಳುವಳಿ ಮಾಡಿ 700ಕ್ಕೂ ಹೆಚ್ಚು ರೈತರನ್ನು ಕಳೆದುಕೊಳ್ಳಲಾಗಿದ್ದು, ಇದರ ಹೊಣೆಗಾರಿಕೆಯನ್ನು ಪ್ರಧಾನಿ ಮೋದಿಯವರೆ ಹೊರಬೇಕು ಎಂದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಪ್ರಸನ್ನ ಗೌಡ ಆರ್. ಎನ್ ಮಾತನಾಡಿ ರೈತ ಸಂಘಕ್ಕೆ ತನ್ನದೇ ಆದ ಶಕ್ತಿ ಇದ್ದು ಇದರ ಸಿದ್ಧಾಂತವನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ಸಾವಿರಾರು ವರ್ಷಗಳ ಸಮಾನತೆಯ ಕನಸು ನನಸಾಗಿಸಲು ಪ್ರತಿಯೊಬ್ಬ ಪ್ರಜೆಯೂ ಶ್ರಮಿಸುವ ಅತ್ಯವಶ್ಯಕತೆ ಇದ್ದು, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ರವರ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳನ್ನು ಈಡೇರಿಸಲು ಸಂಘವು ಸ್ಥಾಪನೆಯಾಗಿದ್ದು ಇದಕ್ಕೆ ಪೂರಕವಾಗಿ ಪ್ರತಿಯೊಬ್ಬ ಕಾರ್ಯಕರ್ತರು ಕೂಡ ಕಾರ್ಯ ನಿರ್ವಹಿಸಬೇಕಾಗಿದೆ. ರೈತ ಸಂಘದ ಸದಸ್ಯರು ಜಾಗೃತರಾಗಿ ಅಧಿಕಾರಶಾಹಿಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.
ಪದಾಧಿಕಾರಿಗಳ ನೇಮಕ:
ಸಂಘದ ಗೌರವ ಅಧ್ಯಕ್ಷರಾಗಿ ಶ್ರೀನಿವಾಸ್, ಅಧ್ಯಕ್ಷರಾಗಿ ಮಂಜು, ಉಪಾಧ್ಯಕ್ಷರಾಗಿ ಮಹದೇವ್, ಕಾರ್ಯದರ್ಶಿಗಳಾಗಿ ಮಂಜು, ಕುಮಾರ್, ಖಜಾಂಚಿಯಾಗಿ ಮುರುಗೇಶ್ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್ ರಾಜೇ ಅರಸ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕೆಂಪೇಗೌಡ, ಮಹಿಳಾ ಅಧ್ಯಕ್ಷೆ ನೇತ್ರಾವತಿ, ಚಿಕ್ಕಣ್ಣ, ತಾಲೂಕು ಅಧ್ಯಕ್ಷ ಶಿವಣ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ, ವಕೀಲ ಬಿ,ವಿ ಜವರೇಗೌಡ, ಪುರಸಭೆ ಸದಸ್ಯ ಪ್ರಕಾಶ್ ಸಿಂಗ್, ಪ್ರಕಾಶ್, ಮುಖಂಡರಾದ ಕೊಣಸೂರು ಮಲ್ಲೇಶ್, ದೇವರಾಜು, ರಮೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.