ಹೊಸದಿಲ್ಲಿ : ಒಟ್ಟಾರೆ ವೈಜ್ಞಾನಿಕ ತಾರ್ಕಿಕತೆ ಮತ್ತು ಲಭ್ಯವಿರುವ ಲಸಿಕೆಗಳ ಪೂರೈಕೆ ಪರಿಸ್ಥಿತಿಯ ಆಧಾರದ ಮೇಲೆ ಮಕ್ಕಳು ಮತ್ತು ಹದಿಹರೆಯದವರಿಗೆ ಕೋವಿಡ್ ಲಸಿಕೆ ನೀಡುವ ಕುರಿತು ಸರಕಾರ ನಿರ್ಧರಿಸಲಿದೆ ಎಂದು ಕೋವಿಡ್ 19 ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ. ಕೆ.ಪಾಲ್ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ.
‘ಸೋಂಕುಗಳ ಪ್ರಮಾಣ ಕಡಿಮೆಯಾಗುತ್ತಿದೆ ಮತ್ತು ಎರಡನೇ ಅಲೆಯೂ ಕಡಿಮೆಯಾಗುತ್ತಿದೆ ಆದರೆ ಅನೇಕ ದೇಶಗಳು ಎರಡಕ್ಕಿಂತ ಹೆಚ್ಚು ಅಲೆಗಳನ್ನು ಕಂಡಿದ್ದರಿಂದ ಕೆಟ್ಟ ಕಾಲ ಮುಗಿದಿದೆ ಎಂದು ಈಗ ಹೇಳುವುದು ಸರಿಯಲ್ಲ’ ಎಂದು ವಿ. ಕೆ.ಪಾಲ್ ಅಭಿಪ್ರಾಯ ಪಟ್ಟರು.
‘ಹದಿಹರೆಯದವರು ಮತ್ತು ಮಕ್ಕಳಿಗಾಗಿ ಹಲವು ದೇಶಗಳು ಲಸಿಕೆಯನ್ನು ಪರಿಚಯಿಸಿರುವುದು ನಮಗೆ ತಿಳಿದಿದ್ದು, ಒಟ್ಟಾರೆ ವೈಜ್ಞಾನಿಕ ತಾರ್ಕಿಕತೆ ಮತ್ತು ಮಕ್ಕಳ ಪರವಾನಗಿ ಪಡೆದ ಲಸಿಕೆಗಳ ಪೂರೈಕೆ ಪರಿಸ್ಥಿತಿಯನ್ನು ಆಧರಿಸಿ ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ವಿ. ಕೆ.ಪಾಲ್ ಪ್ರತಿಕ್ರಿಯೆ ನೀಡಿದರು.
ದೇಶವು ಪ್ರಸ್ತುತ 18 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್, ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಎನ್ನುವ ಮೂರು ಲಸಿಕೆಗಳನ್ನು ನೀಡುತ್ತಿರುವುದನ್ನು ಗಮನಿಸಬಹುದು. ಇವೆಲ್ಲವೂ ಎರಡು ಡೋಸ್ ಲಸಿಕೆಗಳು.
Zydus Cadila ದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸೂಜಿ ರಹಿತ ಕೋವಿಡ್ -19 ಲಸಿಕೆ ZyCoV-D ಯ ತುರ್ತು ಬಳಕೆಯ ಅಧಿಕಾರವನ್ನು (EUA) ಪಡೆದಿದೆ, ಇದು 12-18 ವಯಸ್ಸಿನವರಿಗೆ ಭಾರತದಲ್ಲಿ ಲಭ್ಯವಿರುವ ಮೊದಲ ಲಸಿಕೆಯಾಗಿದೆ.
ಮತ್ತೊಂದೆಡೆ, ಭಾರತದ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಕೆಲವು ಷರತ್ತುಗಳೊಂದಿಗೆ 2-18 ವರ್ಷ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರಿಗೆ ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ಗೆ EUA ನೀಡಲು ಶಿಫಾರಸು ಮಾಡಿದೆ.