Advertisement

ಹೊನ್ನಾಳ ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳ ಶತ ಪ್ರಯತ್ನ

06:00 AM Jun 10, 2018 | Team Udayavani |

ಬ್ರಹ್ಮಾವರ: ಗ್ರಾಮೀಣ ಪರಿಸರದ ಸರಕಾರಿ ಶಾಲೆಯೊಂದನ್ನು ಹೇಗೆ ಉಳಿಸಬಹುದು ಎನ್ನುವುದಕ್ಕೆ ಹೊನ್ನಾಳ ಸರಕಾರಿ ಶಾಲಾ ಹಳೆ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ.

Advertisement

ಆಂಗ್ಲ ಮಾಧ್ಯಮ ಶಾಲೆಗಳ ಕಾರಣದಿಂದ ಗ್ರಾಮದ ಅನುದಾನಿತ ಶಾಲೆಯೊಂದು ಕಣ್ಣು ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಗ್ರಾಮದ ಯುವಕರ ಪಡೆ, ಈಗಿರುವ ಸರಕಾರಿ ಶಾಲೆಯನ್ನು ಉಳಿಸಲು ಶತ ಪ್ರಯತ್ನ ನಡೆಸುತ್ತಿದೆ.  

ಮೂಲ ಸೌಕರ್ಯ
ಶತಮಾನ ಕಂಡ ಹೊನ್ನಾಳ ಸರಕಾರಿ ಉರ್ದು ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದನ್ನು ಹಳೆ ವಿದ್ಯಾರ್ಥಿ ಸಂಘ ಮನಗಂಡಿದೆ. ಇದಕ್ಕಾಗಿ ದಾನಿಗಳ ನೆರವಿನಿಂದ ಶಾಲೆಗೆ ಅಗತ್ಯ ಇರುವ ಮೂಲ ಸೌಕರ್ಯ ಒದಗಿಸುತ್ತಿದೆ ಅಲ್ಲದೇ ಈ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ಯನ್ನು ಆರಂಭಿಸಿದೆ.

ಶಾಲೆಯ ಹಿನ್ನೆಲೆ
1914ರಲ್ಲಿ ಖಾಸಗಿ ಕಟ್ಟಡದಲ್ಲಿ ಸ್ಥಾಪನೆಗೊಂಡ ಈ ಶಾಲೆಯು ಆರಂಭದಲ್ಲಿ 5ನೇ ತರಗತಿವರೆಗೆ, ಮುಂದೆ ಸ್ವಂತ ಕಟ್ಟಡದ ಬಳಿಕ ಏಳನೇ ತರಗತಿವರೆಗೆ ಆರಂಭಿಸಿತು. ಗ್ರಾಮಸ್ಥರೇ ಖರೀದಿಸಿದ ಸುಮಾರು 60 ಸೆಂಟ್ಸ್‌ ಜಾಗದಲ್ಲಿ ಸರಕಾರ ಕಟ್ಟಡ ನಿರ್ಮಿಸಿತ್ತು. ಪ್ರಸ್ತುತ ಈ ಶಾಲೆಯಲ್ಲಿ ಒಟ್ಟು ನಾಲ್ಕು ಶಿಕ್ಷಕರು ಹಾಗೂ 82 ಮಕ್ಕಳಿದ್ದಾರೆ. ಹಿಂದಿನ ವರ್ಷ 91 ಮಕ್ಕಳು ಕಲಿಯುತ್ತಿದ್ದರು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಒಂದನೆ ತರಗತಿಗೆ ಈ ವರೆಗೆ ಏಳು ಮಂದಿ ದಾಖಲಾಗಿದ್ದಾರೆ.

ಹಳೆ ವಿದ್ಯಾರ್ಥಿ ಸಂಘ ರಚನೆ
ದಾಖಲಾತಿ ಕುಸಿತದಿಂದಾಗಿ ಸೊರಗುತ್ತಿರುವ ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳು ಮುಂದಾದರು. ಇದಕ್ಕಾಗಿ ಹೊನ್ನಾಳ, ದುಬೈ, ಸೌದಿ ಅರೆಬಿಯಾ, ಕುವೈಟ್‌, ಒಮನ್‌ ಘಟಕಗಳನ್ನು ಸ್ಥಾಪಿಸಿದರು. ಈ ಶಾಲೆಗೆ ಹೊನ್ನಾಳ, ಬೈಕಾಡಿ, ಕುಕ್ಕುಡೆ, ಗಾಂಧಿನಗರಗಳಿಂದ ಎಲ್ಲ ಧರ್ಮಗಳ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇವರಿಗೆ ಅನುಕೂಲವಾಗಲು ಹಳೆ ವಿದ್ಯಾರ್ಥಿ ಸಂಘ ದುಬೈ ಘಟಕದ ಅಧ್ಯಕ್ಷ ಅಶ#ಕ್‌ ಜೆ. ನೇತೃತ್ವದಲ್ಲಿ ಶಾಲಾ ವಾಹನವನ್ನು ಖರೀದಿಸಲಾಗಿದೆ. ದಾನಿಗಳ ನೆರವಿನಿಂದ ರಂಗಮಂದಿರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಶಾಲೆಗೆ ಒದಗಿಸಲಾಗಿದೆ. 

Advertisement

ಶಾಲೆಗಾಗಿ ಕ್ರಿಕೆಟ್‌ ಪಂದ್ಯಾಟ
ಮುಂದೆ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಯನ್ನು ಆರಂಭಿಸಲು ಚಿಂತಿಸಿದ ಸಂಘ ಅದಕ್ಕಾಗಿ ಹಣ ಸಂಗ್ರಹಿಸಲು ಯೋಜನೆ ಹಾಕಿಕೊಂಡಿತು. ಕಳೆದ ವರ್ಷದಿಂದ ಹೊನ್ನಾಳ ಕ್ರಿಕೆಟ್‌ ಪ್ಲೇಯರ್ ಸಹಯೋಗದಲ್ಲಿ ಎರಡು ಕ್ರಿಕೆಟ್‌ ಪಂದ್ಯಾಟ ನಡೆಸಿ ಕ್ರಮವಾಗಿ 2 ಲಕ್ಷ ಹಾಗೂ ಒಂದು ಲಕ್ಷ ರೂ. ಸಂಗ್ರಹಿಸಿತು.

ದುಡಿಮೆಯ ಪಾಲು
ಗಲ್ಫ್ ದೇಶಗಳಲ್ಲಿ ದುಡಿಯುತ್ತಿರುವ ವಿವಿಧ ಘಟಕಗಳ ಸದಸ್ಯರು ತಮ್ಮ ದುಡಿಮೆಯಲ್ಲಿ ನೆರವು ನೀಡಿ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಯನ್ನು ಆರಂಭಿಸಿದ್ದು, ಈವರೆಗೆ ಎಲ್‌ಕೆಜಿಗೆ 20 ಹಾಗೂ ಯುಕೆಜಿಗೆ 14 ಮಕ್ಕಳು ಸೇರ್ಪಡೆ ಗೊಂಡಿದ್ದಾರೆ. ಸಂಘದ ವತಿಯಿಂದ ಈ ಎರಡು ತರಗತಿಗೆ ಶಿಕ್ಷಕರನ್ನು ಮತ್ತು ಓರ್ವ ಗುಮಾಸ್ತನನ್ನು ನೇಮಕ ಮಾಡಲಾಗಿದೆ.

ಮುಖ್ಯೋಪಾಧ್ಯಾಯರೇ ಇಲ್ಲ!
ಪ್ರಸ್ತುತ ಈ ಶಾಲೆಗೆ ಮುಖ್ಯೋಪಾಧ್ಯಾಯರೇ ಇಲ್ಲ. ಶಾಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದ ಆಗಿನ ಮುಖ್ಯೋಪಾಧ್ಯಾಯ ಇಮಾಮ್‌ ಸಾಹೇಬ್‌ ಟಂಕಸಾಲಿ ಮೂರು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಅವರ ಅನಂತರ ಮುಖ್ಯೋಪಾಧ್ಯಾಯರ ನೇಮಕ ಆಗಿಲ್ಲ. ಈಗ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಮೆಹಬೂಬಿ ಪಣಿಬಂದ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆಗೆ ಮುಖ್ಯೋಪಾಧ್ಯಾಯರ ನೇಮಕ ಹಾಗೂ ಸುಸಜ್ಜಿತ ಮೈದಾನ ಆಗಬೇಕು ಎನ್ನುವುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ.

ಮುಖ್ಯ ಶಿಕ್ಷಕರ ನೇಮಕ
ನೀತಿ ಸಂಹಿತೆ ಮುಗಿದ ತತ್‌ಕ್ಷಣ ಜೂ.18ರಿಂದ ಅರ್ಹತೆ ಇರುವ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ಭಡ್ತಿ ಪ್ರಕ್ರಿಯೆ ನಡೆಯಲಿದೆ.ಆಗ ಈ ಶಾಲೆಯನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುವುದು. 
– ಶೇಷಶಯನ ಕಾರಿಂಜ ಡಿಡಿಪಿಐ, ಉಡುಪಿ

ವಾರ್ಷಿಕ 6 ಲಕ್ಷ ರೂ.
ಎಲ್‌ಕೆಜಿ, ಯುಕೆಜಿಗೆ ನೇಮಕ ಮಾಡಿರುವ ಶಿಕ್ಷಕರ, ಗುಮಾಸ್ತರ, ಶಾಲಾ ವಾಹನದ ಚಾಲಕರ ವೇತನ, ಡೀಸೆಲ್‌ ಖರ್ಚು ಸೇರಿದಂತೆ ವರ್ಷಕ್ಕೆ ಆರು ಲಕ್ಷ ರೂ.ವರೆಗೆ ವೆಚ್ಚ ಆಗುತ್ತದೆ. ಅದನ್ನೆಲ್ಲ ಸಂಘವೇ ಭರಿಸುತ್ತದೆ. ಒಟ್ಟಾರೆ ಶಾಲೆಯ ಉಳಿವು ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ನಮ್ಮ ಉದ್ದೇಶ 
– ಆರಿಫ‌ುಲ್ಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ

ಉಳಿಸುವ ಪ್ರಯತ್ನ
ಈ ಗ್ರಾಮದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಇವರಿಗೆ ಖಾಸಗಿ ಶಿಕ್ಷಣ ಗಗನ ಕುಸುಮವಾಗಿದೆ. ಈ ಸರಕಾರಿ ಶಾಲೆಯನ್ನು ಉಳಿಸಿಕೊಳ್ಳದಿದ್ದರೆ ಗ್ರಾಮದ ಮಕ್ಕಳು ಸರಕಾರಿ ಶಾಲೆಗಾಗಿ 8 ಕಿ.ಮೀ. ದೂರದ ಬ್ರಹ್ಮಾವರಕ್ಕೆ ಹೋಗಬೇಕು. ಈ ಎಲ್ಲ ಕಾರಣಕ್ಕಾಗಿ ಇದ್ದ ಸರಕಾರಿ ಶಾಲೆಯನ್ನು ಉಳಿಸುವ ಪ್ರಯತ್ನವನ್ನು ನಾವೆಲ್ಲ ಮಾಡುತ್ತಿದ್ದೇವೆ.
 - ಎಚ್‌. ಸುಬಾನ್‌ ಅಹ್ಮದ್‌, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next