Advertisement

ಸುರಕ್ಷಿತ ಸ್ಥಳಕ್ಕೆ ಕಾಶ್ಮೀರಿ ಪಂಡಿತರು; ಕೇಂದ್ರ ಸರಕಾರದ ಮಹತ್ವದ ನಿರ್ಧಾರ

10:48 AM Jun 06, 2022 | Team Udayavani |

ಹೊಸದಿಲ್ಲಿ/ಶ್ರೀನಗರ: ಜಮ್ಮು -ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತ ಸಮುದಾಯ ಮತ್ತು ಸ್ಥಳೀಯರಲ್ಲದ ಸರಕಾರಿ ಅಧಿಕಾರಿಗಳನ್ನು ಎಂಟು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.

Advertisement

ಒಂದು ತಿಂಗಳ ಅವಧಿಯಲ್ಲಿ ಉಗ್ರರು ಕಾಶ್ಮೀರಿ ಪಂಡಿತ ಸಮುದಾಯದವರನ್ನು ಗುರಿಯಾಗಿಸಿ ಹತ್ಯೆ ಮಾಡುತ್ತಿರುವುದರಿಂದ ತುರ್ತಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸುರಕ್ಷಿತ ಪ್ರದೇಶಗಳಿಗೆ ಹೋಗುವುದೇ ಉತ್ತಮ ಎಂದು ಜತೆಗೆ ಭಯಗ್ರಸ್ತ ಪಂಡಿತ ಸಮುದಾಯದವರು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಶೀಘ್ರವೇ ಈ ಕ್ರಮ ಜಾರಿಯಾಗಲಿದೆ.

ಕಾಶ್ಮೀರದ ದೂರ ಪ್ರದೇಶಗಳಲ್ಲಿ ಪ್ರಧಾನಮಂತ್ರಿಗಳ ವಿಶೇಷ ಯೋಜನೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರ ಪಂಡಿತ ಸಮುದಾಯ ಮತ್ತು ಸ್ಥಳೀಯರಲ್ಲದ ಸರಕಾರಿ ಅಧಿಕಾರಿಗಳನ್ನು ಎಂಟು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಬಗ್ಗೆ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಎಂಟು ಜಿಲ್ಲಾ ಕೇಂದ್ರಗಳೇ ಸುರಕ್ಷಿತ ಎಂದು ಪರಿಗಣಿಸಲಾಗಿದೆ.

ಇದುವರೆಗೆ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಕಂದಾಯ ಅಧಿಕಾರಿ ರಾಹುಲ್‌ ಭಟ್‌, ಶಿಕ್ಷಕಿ ರಜನಿ ಬಾಲಾ, ರಾಜಸ್ಥಾನದ ಮೂಲಕ ಬ್ಯಾಂಕ್‌ ಅಧಿಕಾರಿ ವಿಜಯ ಕುಮಾರ್‌, ಬಿಹಾರದ ಇಬ್ಬರು ವಲಸೆ ಕಾರ್ಮಿಕರ ಸಹಿತ 12 ಮಂದಿಯನ್ನು ಉಗ್ರರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಪ್ರಚೋದಿಸಲು ಕೃತ್ಯ
ಗಡಿ ಭಾಗದಲ್ಲಿ ಇರುವ ಯೋಧರನ್ನು ಪ್ರಚೋದಿಸುವುದಕ್ಕಾಗಿಯೇ ಹಿಂದೂಗಳನ್ನು ಗುರುತಿಸಿ ದಾಳಿ ನಡೆಸಲಾಗುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಮ್ಮು – ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ರವಿವಾರ ಹೇಳಿದ್ದಾರೆ. ಇದು ಉಗ್ರಗಾಮಿಗಳ ಹತಾಶೆಯ ಕೃತ್ಯ ಎಂದು ಅವರು ಬಣ್ಣಿಸಿದ್ದಾರೆ. ಬೆಂಕಿ ಆರುವ ಮೊದಲು ಪ್ರಜ್ವಲಿಸಿ ಉರಿಯುತ್ತದೆ. ಅದೇ ರೀತಿ ಉಗ್ರರೂ ತಮ್ಮ ಕೊನೆಗಾಲದಲ್ಲಿ ವಿಜೃಂಭಿಸುತ್ತಿದ್ದಾರೆ. ಇಂಥ ಕೃತ್ಯ ಎಸಗಿದವರು ಯಾರೇ ಆಗಲಿ, ಅವರ ವಿರುದ್ಧ ಕ್ರಮ ಕೈಗೊಂಡೇ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Advertisement

ಕಣಿವೆ ತೊರೆಯುವುದು ಬೇಡ
ಉಗ್ರರ ಕೃತ್ಯಗಳಿಂದ ಕಾಶ್ಮೀರ ಪಂಡಿತ ಸಮುದಾಯದವರು ಆತಂಕಗೊಳ್ಳುವುದು ಬೇಡ. ಕೇಂದ್ರ ಸರಕಾರ ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಜಮ್ಮು -ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್‌ ರೈನಾ ಮನವಿ ಮಾಡಿದ್ದಾರೆ. ಇದು ಪಾಕಿಸ್ಥಾನದ ಕುತಂತ್ರ ಎಂದು ಟೀಕಿಸಿದ ಅವರು, ಇದನ್ನು ಬಗ್ಗು ಬಡಿಯಲಿದ್ದೇವೆ ಎಂದರು. ಜಮ್ಮು – ಕಾಶ್ಮೀರ ಎನ್ನುವುದು ದೇಶದ ಮಕುಟ. 32 ವರ್ಷಗಳಿಂದ ನಮ್ಮ ನೆರೆಯ ದೇಶ ನಡೆಸುವ ಛಾಯಾ ಸಮರವನ್ನು ಎದುರಿಸುತ್ತಿದ್ದೇವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶದ ಪೊಲೀಸರು ಮತ್ತು ಸೇನೆಯ ಅಧಿಕಾರಿಗಳಿಗೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ ಕೇಂದ್ರಾಡಳಿತ ಪ್ರದೇಶದ ಭದ್ರತಾ ವ್ಯವಸ್ಥೆ ಗಣನೀಯವಾಗಿ ಸುಧಾರಿಸಿದೆ ಎಂದಿದ್ದಾರೆ.

ಇನ್ನೊಂದೆಡೆ ಜಮ್ಮು -ಕಾಶ್ಮೀರದ ಪರಿಸ್ಥಿತಿಯನ್ನು ಬಿಜೆಪಿಗೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಇನ್ನೊಂದೆಡೆ ಕಾಶ್ಮೀರ ಪಂಡಿತ ಸಮುದಾಯಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಸಚಿವ ಆದಿತ್ಯ ಠಾಕ್ರೆ ವಿಭಿನ್ನ ಹೇಳಿಕೆ ನೀಡಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರಕಾರ ವಿಫ‌ಲವಾಗಿದೆ ಎಂದು ಸಿಎಂ ಉದ್ಧವ್‌ ಠಾಕ್ರೆ ಹೇಳಿದರೆ, ಕಾಶ್ಮೀರ ಪಂಡಿತರಿಗೆ ಶಿವಸೇನೆಯ ಬೆಂಬಲ ಇದೆ ಎಂದು ಉದ್ಧವ್‌ ಪುತ್ರ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರಕ್ಕೆ ಬನ್ನಿ…, ಭದ್ರತೆ ಕೊಡ್ತೇವೆ
“ಕಾಶ್ಮೀರ ಪಂಡಿತ ಸಮುದಾಯದವರೇ ಮಹಾರಾಷ್ಟ್ರಕ್ಕೆ ಬನ್ನಿ. ನಾವು, ನಿಮಗೆ ಸೂಕ್ತ ಭದ್ರತೆಯನ್ನು ನೀಡುತ್ತೇವೆ’ ಹೀಗೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, “ಕಾಶ್ಮೀರ ಪಂಡಿತ ಸಮುದಾಯದವರಿಗೆ ಉಂಟಾಗುತ್ತಿರುವ ಕಷ್ಟಕರವಾಗಿರುವ ಪರಿಸ್ಥಿತಿ ತಪ್ಪಿಸಬೇಕಾಗಿದೆ. ಹೀಗಾಗಿ, ಸಮುದಾಯದವರು ಮಹಾರಾಷ್ಟ್ರಕ್ಕೆ ಬರಲಿ. ಅವರಿಗೆ ಸೂಕ್ತ ಭದ್ರತೆಯನ್ನು ನೀಡಲಾಗುತ್ತದೆ’ ಎಂದು ಹೇಳಿದ್ದಾರೆ. ಮಹಾರಾಷ್ಟ್ರವೇ ಸಮುದಾಯದ ಬೆಂಬಲಕ್ಕೆ ನಿಲ್ಲಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next