Advertisement

Drought Relief; ಕೇಂದ್ರ-ರಾಜ್ಯ ನಡುವೆ ಬರಸಂಘರ್ಷ ಬೇಡ: ಸುಪ್ರೀಂ ಕೋರ್ಟ್‌

12:27 AM Apr 09, 2024 | Team Udayavani |

ಹೊಸದಿಲ್ಲಿ: ಆರ್ಥಿಕ ನೆರವು ಸಂಬಂಧ ಕೇಂದ್ರ ಮತ್ತು ರಾಜ್ಯಗಳ ನಡುವೆ ಕಲಹಗಳು ಉದ್ಭವಿಸಬಾರದು, ಸಹಕಾರ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಕಿವಿಮಾತು ಹೇಳಿದೆ.

Advertisement

18,171 ಕೋಟಿ ರೂ. ಬರ ಪರಿಹಾರ ನೀಡಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ಸರಕಾರ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆಯನ್ನು ನಡೆಸಿದ ವೇಳೆ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಕರ್ನಾಟಕದ ಅರ್ಜಿಗೆ ಪ್ರತಿಕ್ರಿಯಿಸಲು ಕೇಂದ್ರ ಸರಕಾರಕ್ಕೆ 2 ವಾರಗಳ ಕಾಲಾವಕಾಶವನ್ನು ನೀಡಿ ವಿಚಾರಣೆಯನ್ನು ಮುಂದೂಡಿದೆ.

ಬಹಳಷ್ಟು ರಾಜ್ಯಗಳು ಕೋರ್ಟ್‌ ಮೆಟ್ಟಿಲೇರುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯಗಳ ನಡುವೆ ವ್ಯಾಜ್ಯಗಳು ಹೆಚ್ಚಬಾರದು ಎಂದು ನ್ಯಾ| ಬಿ.ಆರ್‌. ಗವಾಯಿ ಮತ್ತು ನ್ಯಾ| ಸಂದೀಪ್‌ ಮೆಹ್ತಾ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠವು ಕಿವಿಮಾತು ಹೇಳಿದೆ.

ನೋಟಿಸ್‌ ನೀಡಬೇಡಿ
ಈ ಪ್ರಕರಣ ಸಂಬಂಧ ನೋಟಿಸ್‌ ನೀಡಬೇಡಿ. ಅದು ಕೂಡ ಸುದ್ದಿಯಾಗುತ್ತದೆ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು. ಪೀಠವು ಈ ಮನವಿಯನ್ನು ಪುರಸ್ಕರಿಸಿತು.ಬರದಿಂದಾಗಿ ರಾಜ್ಯದಲ್ಲಿ 35,162 ಕೋಟಿ ರೂ. ನಷ್ಟವಾಗಿದ್ದು, ಎನ್‌ಡಿಆರ್‌ಎಫ್ನಡಿ 18,171 ಕೋಟಿ ರೂ. ನೆರವಿಗೆ ರಾಜ್ಯ ಸರಕಾರವು ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ. ರಾಜ್ಯದ ಬರ ಅಧ್ಯಯನ ಕೈಗೊಂಡ ಕೇಂದ್ರ ತಂಡವು ತನ್ನ ವರದಿ ಸಲ್ಲಿಸಿ ಆರು ತಿಂಗಳಾದರೂ ಪರಿಹಾರ ನೀಡಿಕೆಯ ಬಗ್ಗೆ ಕೇಂದ್ರ ಸರಕಾರವು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ರಾಜ್ಯವು ವಾದಿಸಿದೆ.

ಕೇಂದ್ರ ಸರಕಾರದ ಪರವಾಗಿ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಮತ್ತು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹಾಗೂ ಕರ್ನಾಟಕ ಸರಕಾರದ ಪರವಾಗಿ ಕಪಿಲ್‌ ಸಿಬಲ್‌ ವಾದ ಮಂಡಿಸಿದರು.

Advertisement

ತಮಿಳುನಾಡು, ಕೇರಳದಿಂದಲೂ
ಸಲ್ಲಿಕೆಯಾಗಿವೆ ಸುಪ್ರೀಂಗೆ ಅರ್ಜಿ
2023ರ ಡಿಸೆಂಬರ್‌ನಲ್ಲಿ ಬೀಸಿದ ಚಂಡಮಾರುತದಿಂದ, ಮಳೆ ಹಾಗೂ ಪ್ರವಾಹದಿಂದ 37,000 ಕೋಟಿ ರೂ. ನಷ್ಟವಾಗಿದೆ. ಆದರೆ ಕೇಂದ್ರ ಸರಕಾರ ಆರ್ಥಿಕ ನೆರವು ನೀಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸರಕಾರವೂ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಸಾಕಷ್ಟು ಮನವಿಗಳ ಹೊರತಾಗಿಯೂ ಕೇಂದ್ರ ಸರಕಾರವು ನೆರವು ನೀಡುತ್ತಿಲ್ಲ. ಇದು ಸಂತ್ರಸ್ತರ ಬದುಕಿನ ಹಕ್ಕಿನ ಉಲ್ಲಂಘನೆ ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ತಿಳಿಸಿದೆ. ಕೇರಳ ಕೂಡ ಇದೇ ರೀತಿಯ ಅರ್ಜಿ ಸಲ್ಲಿಸಿದೆ. ವಾರದ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬಂದಾಗ ಕೇಂದ್ರ ಸರಕಾರವು ವಿರೋಧಿಸಿತ್ತು. ಕೇರಳವು ತನ್ನ ಆರ್ಥಿಕ ಅಶಿಸ್ತಿನಿಂದಾಗಿ ಬಿಕ್ಕಟ್ಟಿಗೆ ಸಿಲುಕಿದೆ ಎಂದು ವಾದಿಸಿತ್ತು. ಆದರೆ ಕೇಂದ್ರ ಸರಕಾರವು ನೆರವು ಬಿಡುಗಡೆಯ ಔದಾರ್ಯ ತೋರಬಹುದು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಕೇಂದ್ರದ ವಾದವೇನು?
-ಕೇಂದ್ರ ಸರಕಾರದ ವಿರುದ್ಧ ರಾಜ್ಯಗಳು ಕೋರ್ಟ್‌ ಮೊರೆ ಹೋಗುವ ಪ್ರವೃತ್ತಿ ಹೆಚ್ಚಾಗುತ್ತಿದೆ.
-ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬದಲು ಸಂಬಂಧಿಸಿದವರ ಜತೆ ಮಾತುಕತೆ ನಡೆಸಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು.
-ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನೋಟಿಸ್‌ ನೀಡುವುದು ಬೇಡ. ನೀಡಿದರೆ ಅದೂ ಸುದ್ದಿಯಾಗುತ್ತದೆ.
-ಕರ್ನಾಟಕ ರಾಜ್ಯ ಸರಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಮಾಡಿದ ಸಮಯವನ್ನು (ಲೋಕಸಭೆ ಚುನಾವಣೆ ಸಮಯ) ಪರಿಗಣಿಸಬೇಕಾಗುತ್ತದೆ.

ಕರ್ನಾಟದ ವಾದವೇನು?
-ವಿಪತ್ತು ನಿರ್ವಹಣ ಕಾಯ್ದೆಯ ಪ್ರಕಾರ ಕೇಂದ್ರ ಸರಕಾರವು ರಾಜ್ಯಗಳಿಗೆ ನೆರವು ನೀಡಬೇಕು.
-ಬರ ಕುರಿತು ಕೇಂದ್ರ ತಂಡ ಸಲ್ಲಿಸಿದ ವರದಿಯ ತಿಂಗಳೊಳಗೇ ಆರ್ಥಿಕ ನೆರವಿನ ಬಗ್ಗೆ ಕೇಂದ್ರ ಅಂತಿಮ ನಿರ್ಧಾರ ಕೈಗೊಳ್ಳಬೇಕು.
-ಕೇಂದ್ರ ತಂಡದ ವರದಿ ಸಲ್ಲಿಕೆಯಾದ ಆರು ತಿಂಗಳುಗಳ ಬಳಿಕವೂ ಕೇಂದ್ರ ಸರಕಾರವು ಯಾವುದೇ ನಿರ್ಧಾರ ಕೈಗೊಂಡಿಲ್ಲ.
-ಕೇಂದ್ರದ ಈ ವಿಳಂಬ ಧೋರಣೆಯು ಸಂವಿಧಾನದ 14 ಮತ್ತು 21ವಿಧಿಯಡಿ ಪ್ರಜೆಗಳ ಮೂಲಭೂತ ಹಕ್ಕಿನ ಉಲ್ಲಂಘನೆ.

Advertisement

Udayavani is now on Telegram. Click here to join our channel and stay updated with the latest news.

Next