Advertisement

ಕೇಳಿದ್ದು ಅನುದಾನ, ಮಾಡಿದ್ದು ಅವಮಾನ: ಕೃಷ್ಣ ಬೈರೇಗೌಡ

11:49 PM Apr 06, 2024 | Team Udayavani |

ಬೆಂಗಳೂರು: ಕೇಂದ್ರ ಸರಕಾರದ ನೀತಿಗಳಿಂದಾಗಿ ರಾಜ್ಯಕ್ಕೆ ಕಳೆದ ಐದು ವರ್ಷದಲ್ಲಿ 1.85 ಲಕ್ಷ ಕೋಟಿ ರೂ ಕೈತಪ್ಪಿದೆ. ಪ್ರತಿವರ್ಷ ಸುಮಾರು 52 ಸಾವಿರ ಕೋಟಿ ರೂ ನಷ್ಟ ಅನುಭವಿಸುವಂತಾಗಿದೆ. ನಾವು ನಮಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಕೇಳಿದರೆ ಕೇಂದ್ರ ಸರಕಾರ ಅವಮಾನ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Advertisement

ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯಗಳ ಬಗ್ಗೆ ಚರ್ಚಿಸಲು ಬಹಿರಂಗ ಸವಾಲು ಹಾಕಿದ್ದ ಸಚಿವರು, ಜಾಗೃತ ಕರ್ನಾಟಕ, ರೈತ ಸಂಘ ಮತ್ತು ಕನ್ನಡಪಡ ಸಂಘಟನೆಗಳು ಗಾಂಧಿ ಭವನದಲ್ಲಿ ಆಯೋಜಿಸಿದ್ದ ಜಿಎಸ್‌ಟಿ, ಸೆಸ್‌, ತೆರಿಗೆ, ಬರ ಪರಿಹಾರ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಎಂಬ ಬಹಿರಂಗ ಸಭೆಯಲ್ಲೇ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೂ ಒಂದು ಕುರ್ಚಿಯನ್ನು ಹಾಕಿ ಕಾದು ಕುಳಿತಿದ್ದರು. ಅಷ್ಟರಲ್ಲಿ ಅವರು ಪ್ರತ್ಯೇಕ ಪತ್ರಿಕಾಗೋಷ್ಠಿ ಮೂಲಕ ಕೇಂದ್ರ ಕೊಟ್ಟ ತೆರಿಗೆ ಪಾಲಿನ ವಿವರಣೆ ನೀಡಿದ್ದರಿಂದ ಕೃಷ್ಣ ಬೈರೇಗೌಡ ಒಂಟಿಯಾಗಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ರಾಜ್ಯಗಳಿಗೆ ವ್ಯಾಟ್‌ ವಿಧಿಸುವ ಅಧಿಕಾರವಿದ್ದಾಗ ವಾರ್ಷಿಕವಾಗಿ ಸರಾಸರಿ ಶೇ. 15ರಷ್ಟು ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಪ್ರಗತಿ ದಾಖಲಿಸಿತ್ತು. ಆದರೆ, ಜಿಎಸ್‌ಟಿ ಬಂದ ಬಳಿಕ ರಾಜ್ಯಕ್ಕೆ ಸುಮಾರು 60 ಸಾವಿರ ಕೋಟಿ ರೂ. ವಾರ್ಷಿಕ ನಷ್ಟವಾಗಿದೆ ಎಂದರು.

ಯುಪಿಎ ಸರಕಾರದ ಅವಧಿಯಲ್ಲಿ ರಚನೆಯಾಗಿದ್ದ 13ನೇ ಹಣಕಾಸು ಆಯೋಗ ರಾಜ್ಯಗಳಿಗೆ ಶೇ.32 ತೆರಿಗೆ ಪಾಲು ನಿಗದಿಪಡಿಸಿದ್ದರೂ ಶೇ.28ರಷ್ಟು ಮಾತ್ರ ತೆರಿಗೆ ಪಾಲು ಸಿಕ್ಕಿತ್ತು. 14ನೇ ಹಣಕಾಸು ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧದ ನಡುವೆಯೂ ರಾಜ್ಯಗಳ ತೆರಿಗೆ ಪಾಲನ್ನು ಶೇ. 42ಕ್ಕೆ ಏರಿಸಿತ್ತು. ಆದರೆ ವಾಸ್ತವದಲ್ಲಿ ಶೇ. 35ರಷ್ಟು ಮಾತ್ರ ತೆರಿಗೆ ಪಾಲನ್ನು ನೀಡಲಾಗಿತ್ತು. ಹದಿನೈದನೇ ಹಣಕಾಸು ಆಯೋಗ ಶೇ. 41 ತೆರಿಗೆ ಪಾಲನ್ನು ನೀಡಿದ್ದರೂ ವಾಸ್ತವದಲ್ಲಿ ಶೇ. 30ರಷ್ಟು ಮಾತ್ರ ತೆರಿಗೆ ಪಾಲನ್ನು ಕೇಂದ್ರ ಸರಕಾರ ನೀಡಿದೆ ಎಂದು ಹೇಳಿದರು.

ಯುಪಿಎ ಕಾಲದಲ್ಲಿ ಶೇ. 8ರಷ್ಟು ಸೆಸ್‌, ಸರ್‌ಚಾರ್ಜ್‌ಗಳಿದ್ದರೆ, ಎನ್‌ಡಿಎ ಸರಕಾರ ಶೇ. 22ರಷ್ಟು ಸೆಸ್‌, ಸರ್‌ಚಾರ್ಜ್‌ಗಳನ್ನು ವಿಧಿಸುತ್ತಿದೆ. ಇನ್ನು ಕೇಂದ್ರ ಸರಕಾರದ ಪುರಸ್ಕೃತ ಯೋಜನೆಗಳಿಗೆ ಹಣ ನೀಡುತ್ತಿದ್ದೇವೆ ಎಂದು ವಾದಿಸಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರದ ಯೋಜನೆಗಳಿಗೆ ಶೇ. 50ಕ್ಕಿಂತ ಹೆಚ್ಚು ಅನುದಾನವನ್ನು ರಾಜ್ಯ ಸರಕಾರವೇ ಭರಸುತ್ತಿದೆ ಎಂದರು.

Advertisement

ಕಾರ್ಯಕ್ರಮದ ಆಯೋಜಕರು ಮಾತನಾಡಿ, ನಿರ್ಮಲಾ ಸೀತಾರಾಮನ್‌ ಅವರಿಗೆ ಇ-ಮೇಲ್‌ ಮೂಲಕ ಚರ್ಚೆಗೆ ಆಹ್ವಾನಿಸಲಾಗಿದೆ. ಇಬ್ಬರಿಗೂ ಪ್ರತ್ಯೇಕ ಕುರ್ಚಿ ಹಾಕಲಾಗಿದೆ ಎಂದರು. ಆದರೆ ನಿರ್ಮಲಾ ಸೀತಾರಾಮನ್‌ ಅವರು ನಗರಕ್ಕೆ ಬಂದರೂ ಸಂವಾದಕ್ಕೆ ಬಂದಿರಲಿಲ್ಲ. ಅವರಿಗೆ ಹಾಕಲಾಗಿದ್ದ ಕುರ್ಚಿಯನ್ನು ಹಾಗೆಯೇ ಕೊನೆ ತನಕ ಬಿಡಲಾಗಿತ್ತು.

ಕಾರ್ಯಕ್ರಮದಲ್ಲಿ ರೈತ ಮುಖಂಡ ಬಡಗಲಾಪುರ ನಾಗೇಂದ್ರ, ಸಾಮಾಜಿಕ ಕಾರ್ಯಕರ್ತ ವಾಸು, ಪಿಚ್ಚಳ್ಳಿ ಶ್ರೀನಿವಾಸ್‌, ನಿಕೇತ್‌ ರಾಜ್‌ ಮೌರ್ಯ ಮುಂತಾದವರಿದ್ದರು.

ನನಗೆ ರಾಜ್ಯದ ಹಿತದೃಷ್ಟಿಯೇ ನನಗೆ ಮುಖ್ಯ. ಇದರಲ್ಲಿ ರಾಜಕೀಯ ಇಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಚರ್ಚೆಗೆ ಬರಲಿದ್ದಾರೆ ಎಂದು ಭಾವಿಸಿದ್ದೆ . ಅವರ ಮತ್ತು ನನ್ನ ಮಧ್ಯೆ ಉತ್ತಮ ವಿಶ್ವಾಸವಿದೆ. ಇಲ್ಲಿ ವೈಯಕ್ತಿಕ ವಾದ- ವ್ಯಾಜ್ಯ ಇಲ್ಲ. ರಾಜ್ಯದ ಜನರ ಹಿತದೃಷ್ಟಿಯೇ ನನಗೆ ಮುಖ್ಯ.
– ಕೃಷ್ಣಬೈರೇಗೌಡ, ಕಂದಾಯ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next