ವಿಜಯಪುರ : ಕಳೆದ ವರ್ಷ ರಾಜ್ಯದಲ್ಲಿ ಶೇ.12 ರಷ್ಟು ಬಸ್ ದರ ಏರಿಕೆ ಮಾಡಿದ್ದು, ನಂತರ ಕೋವಿಡ್ ಸಂಕಷ್ಟವೂ ಎದುರಾಗಿದೆ. ಹೀಗಾಗಿ ರಾಜ್ಯದಲ್ಲಿ ಸಾರಿಗೆ ಸಂಸ್ಥೆಗಳ ಬಸ್ ದರ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರ ಮುಂದಿಲ್ಲ. ಹೀಗಾಗಿ ಬಸ್ ದರ ಏರಿಕೆ ಮಾಡಲಾಗುತ್ತದೆ ಎಂಬುದು ಸುಳ್ಳು ಎಂದು ಸಾರಿಗೆ ಖಾತೆ ಹೊಂದಿರುವ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಗಾಣಿಗ ಸಮಾಜದ ಮೀಸಲಾತಿ ವಿಷಯವಾಗಿ ಯಾವುದೇ ಹೋರಾಟ ನಡೆಸುವ ನಿಟ್ಟಿನಲ್ಲಿ ಚರ್ಚೆ ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗಾಣಿಗ ಸಮಾಜಕ್ಕೆ ಈಗಾಗಲೇ ಪ್ರವರ್ಗ 2ಎ ಮೀಸಲಾತಿ ಸೌಲಭ್ಯ ಸಿಕ್ಕಿರುವ ಕಾರಣ ಕೊಲ್ಹಾರದ ಕಲ್ಲಿನಾಥ ಶ್ರೀಗಳು ಮೀಸಲಾತಿ ಕುರಿತು ನೀಡುವ ಹೇಳಿಕೆ ಗೊಂದಲ ಸೃಷ್ಟಿಸುತ್ತವೆ. ಹೀಗಾಗಿ ಇಂಥ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ:ರಾಮ ಮಂದಿರ ದೇಣಿಗೆ ಅಭಿಯಾನ ಸಂಪನ್ನ…ಇದುವರೆಗೆ ಸಂಗ್ರಹಗೊಂಡಿದ್ದು ಎಷ್ಟು ಕೋಟಿ ?
ಸಿಂದಗಿ ವಿಧಾನಸಭೆ ಉಪ ಚುನವಣೆಗೆ ನಾನು ಸ್ಪರ್ಧಿಸುತ್ತೇನೆ ಎಂಬುದು ಕೇವಲ ಊಹಾಪೋಹ. ಸ್ಥಳೀಯರಲ್ಲೇ ಸಮರ್ಥ ನಾಯಕರನ್ನು ಕಣಕ್ಕಿಳಿಸಿ ಗೆಲ್ಲಿಸುತ್ತೇವೆ. ಹೀಗಾಗಿ ನಾನು ಸ್ಪರ್ಧಿಸುತ್ತೇನೆ ಎಂದು ಮಾಧ್ಯಮಗಳಲ್ಲಿ ನನ್ನ ಹೆಸರು ಪ್ರಸ್ತಾಪಿಸಿ ಗೊಂದಲ ಮೂಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.