Advertisement

ಸಿಬಿಐ, ಇ.ಡಿ. ಮುಖ್ಯಸ್ಥರ ಸೇವಾವಧಿ ಹೆಚ್ಚಳಕ್ಕೆ ಅಸ್ತು

07:43 PM Dec 14, 2021 | Team Udayavani |

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಿರ್ದೇಶಕ ಹಾಗೂ ಜಾರಿ ನಿರ್ದೇಶನಾಲಯದ (ಇ.ಡಿ.) ಮುಖ್ಯಸ್ಥರ ಸೇವಾವಧಿಗಳನ್ನು 5 ವರ್ಷಗಳವರೆಗೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿದ್ದ ಎರಡು ಪ್ರತ್ಯೇಕ ಮಸೂದೆಗಳಿಗೆ ರಾಜ್ಯಸಭೆ ಒಪ್ಪಿಗೆ ನೀಡಿದೆ.

Advertisement

ಸಿಬಿಐ ಮುಖ್ಯಸ್ಥರ ಸೇವಾವಧಿ ವಿಸ್ತರಣೆಗಾಗಿ “2021ರ ದೆಹಲಿ ಪೊಲೀಸ್‌ ವಿಶೇಷ ಕಾಯ್ದೆ ತಿದ್ದುಪಡಿ ಮಸೂದೆ’ ಹಾಗೂ ಜಾರಿ ನಿರ್ದೇಶನಾಲಯದ ಮುಖ್ಯಸ್ಥರ ಸೇವಾವಧಿ ತಿದ್ದುಪಡಿಗಾಗಿ “2021ರ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಕಾಯ್ದೆ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿತ್ತು.

ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲಗಳ ಹೊರತಾಗಿಯೂ ಈ ಎರಡೂ ಮಸೂದೆಗಳಿಗೆ ಧ್ವನಿಮತದ ಅಂಗೀಕಾರ ಸಿಕ್ಕಿದೆ.

ಕೇಂದ್ರದ ಬಗ್ಗೆ ರಾಹುಲ್‌ ಅಸಮಾಧಾನ
ಸಂಸತ್ತಿನಲ್ಲಿ ಹಲವಾರು ಮಸೂದೆಗಳು ಯಾವುದೇ ಚರ್ಚೆಯಿಲ್ಲದೆ ಒಪ್ಪಿಗೆ ಪಡೆದುಕೊಳ್ಳುತ್ತಿವೆ. ಮಸೂದೆಗಳ ಬಗ್ಗೆ ಚರ್ಚಿಸೋಣವೆಂದರೆ, ಪ್ರಧಾನಿಯವರು ಸಂಸತ್‌ ಕಲಾಪಗಳಲ್ಲಿ ಭಾಗವಹಿಸುತ್ತಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರವೊಂದು ಸಂಸತ್ತನ್ನು ನಡೆಸುವ ರೀತಿ ಇದಲ್ಲ” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ, ರಾಜ್ಯಸಭೆಯಿಂದ ಅಮಾನತುಗೊಂಡ 12 ಸಂಸದರು ಮಂಗಳವಾರ ನವದೆಹಲಿಯ ಸಂಸತ್‌ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆಯಿಂದ ವಿಜಯ್‌ ಚೌಕ್‌ವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಇದರಲ್ಲಿ ರಾಹುಲ್‌ ಗಾಂಧಿ ಕೂಡ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಡೆಗಳನ್ನು ಟೀಕಿಸಿದರು.

Advertisement

ಸರ್ಕಾರದ ನಡೆಗಳ ವಿರುದ್ಧ ಸಂಸತ್ತಿನಲ್ಲಿ ದನಿಯೆತ್ತಲು ವಿಪಕ್ಷಗಳಿಗೆ ಅವಕಾಶವೇ ಇಲ್ಲ. ಹಾಗೆ ದನಿಯೆತ್ತುವವರನ್ನು ಅಮಾನತು ಮಾಡಲಾಗುತ್ತದೆ. ಪ್ರಜಾಪ್ರಭುತ್ವವನ್ನು ಹೀಗೆ ಕೊಲ್ಲುತ್ತಿರುವುದು ಖೇದಕರ” ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಕಾಪು ಕ್ಷೇತ್ರ ಬಿಜೆಪಿ

ಆದೇಶ ಹಿಂಪಡೆಯಲು ಪಟ್ಟು
ಪ್ರತಿಭಟನಾ ಜಾಥಕ್ಕೂ ಮೊದಲು, ಸಂಸದರನ್ನು ಅಮಾನತುಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಅನೇಕ ವಿಪಕ್ಷಗಳ ಸದಸ್ಯರು ರಾಜ್ಯಸಭೆಯ ಸ್ಪೀಕರ್‌ ಮುಂದಿನ ಬಾವಿಯಾಕಾರದ ಆವರಣದೊಳಕ್ಕೆ ಪ್ರವೇಶಿಸಿ ಘೋಷಣೆಗಳನ್ನು ಕೂಗಿದರು.

ಇದಕ್ಕೆ ಸ್ಪಂದಿಸಿದ ರಾಜ್ಯಸಭೆ ಸ್ಪೀಕರ್‌ ವೆಂಕಯ್ಯ ನಾಯ್ಡು ಅವರು, ಅಮಾನತುಗೊಂಡ ಸಂಸದರು ತಮ್ಮ ನಡೆಯ ಬಗ್ಗೆ ಕ್ಷಮೆ ಕೇಳಿದರೆ ಮಾತ್ರ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗುತ್ತದೆ ಎಂದರು. ಆದರೆ, ಇದಕ್ಕೆ ಒಪ್ಪದ ವಿಪಕ್ಷಗಳ ನಾಯಕರು, ಆದೇಶ ಹಿಂಪಡೆಯುವಂತೆ ಪಟ್ಟು ಹಿಡಿದರಲ್ಲದೆ, ಕಲಾಪ ಬಹಿಷ್ಕರಿಸಿ ಜಾಥಾ ಹೊರಟರು. ಹಾಗಾಗಿ, ರಾಜ್ಯಸಭೆಯ ಕಲಾಪಗಳನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಗಿತ್ತು.

ಯುಎಪಿಎ ಕಾಯ್ದೆಗೆ ತಿದ್ದುಪಡಿ ಪ್ರಸ್ತಾವನೆ ಇಲ್ಲ
ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಗೆ (ಯುಎಪಿಎ) ತಿದ್ದುಪಡಿ ತರುವಂಥ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ನಿತ್ಯಾನಂದ ರೈ, ಲೋಕಸಭೆಗೆ ತಿಳಿಸಿದ್ದಾರೆ. ಯುಎಪಿಎ ಕಾಯ್ದೆಯಡಿ ಬಂಧಿತರಾಗಿರುವ ಅನೇಕ ಶಂಕಿತರು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಡುಗಡೆಯಾಗಿರುವ ಕೆಲವು ಉದಾಹರಣೆಗಳಿಂದಾಗಿ ಕೇಂದ್ರ ಸರ್ಕಾರ, ಈ ಕಾಯ್ದೆಗೆ ತಿದ್ದುಪಡಿ ತರುತ್ತದೆಯೇ ಎಂಬ ಲಿಖೀತ ಪ್ರಶ್ನೆಯೊಂದಕ್ಕೆ ಸಚಿವರು ಹೀಗೆ ಉತ್ತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next