ನವದೆಹಲಿ: ಇತರ ದೇಶಗಳಲ್ಲಿ ಬಳಕೆಯಲ್ಲಿರುವ ವಿದೇಶಿ ಉತ್ಪಾದನೆಯ ಕೋವಿಡ್ 19 ಲಸಿಕೆಯನ್ನು ಭಾರತದಲ್ಲಿ ಬಳಸಲು ತ್ವರಿತಗತಿಯಲ್ಲಿ ತುರ್ತು ಅನುಮೋದನೆ ನೀಡಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಇದರಿಂದಾಗಿ ಲಸಿಕೆಗಳನ್ನು ದೇಶೀಯವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಲಸಿಕೆ ಕೊರತೆಯನ್ನು ನಿವಾರಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸಂಸ್ಕೃತ ಕಲಿಯಬೇಕೆ..? ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ ಈ ಆ್ಯಪ್..!
ವಿದೇಶಿ ಲಸಿಕೆ ಬಳಕೆಗೆ ತುರ್ತು ಅನುಮೋದನೆ ನೀಡುವುದರಿಂದ ದೇಶದಲ್ಲಿ ಲಸಿಕೆಯನ್ನು ಬಿಡುಗಡೆ ಮಾಡುವ ಏಳು ದಿನಗಳ ಮೊದಲು ಲಸಿಕೆ ಸುರಕ್ಷತೆಯ ಬಗ್ಗೆ ಆರಂಭಿಕವಾಗಿ ನೂರು ಮಂದಿ ಮೇಲೆ ಪ್ರಯೋಗ ನಡೆಸಿ ಅದರ ಫಲಿತಾಂಶ ಪಡೆಯಲು ಸಾಧ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಿದೆ.
ದೇಶದಲ್ಲಿ ಕೋವಿಡ್ ಸೋಂಕು ದಿಢೀರನೆ ಹೆಚ್ಚಳವಾಗುತ್ತಿದ್ದು, ಕೆಲವು ರಾಜ್ಯಗಳಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಕೊರತೆ ಕಂಡು ಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ನಿಟ್ಟಿನಲ್ಲಿ ವಿದೇಶಿ ಲಸಿಕೆಗಳಿಗೆ ತುರ್ತು ಅನುಮೋದನೆ ನೀಡುವ ಮೂಲಕ ದೇಶೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಬಳಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ಏಪ್ರಿಲ್ 11ರಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಅಧ್ಯಕ್ಷತೆಯಲ್ಲಿ ನಡೆದ 23ನೇ ಕೋವಿಡ್ 19ರ ನ್ಯಾಷನಲ್ ಎಕ್ಸ್ ಪರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ ಆಡ್ಮಿನಿಷ್ಟ್ರೇಶನ್ ಸಭೆಯಲ್ಲಿ ಚರ್ಚಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಈಗಾಗಲೇ ಭಾರತ ರಷ್ಯಾದ ಕೋವಿಡ್ ಲಸಿಕೆ ಸ್ಫುಟ್ನಿಕ್-5 ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಏತನ್ಮಧ್ಯೆ ಜಾನ್ಸನ್ ಆ್ಯಂಡ್ ಜಾನ್ಸನ್, ಜೈಡಸ್ ಕ್ಯಾಡಿಲಾ, ಸೇರಂನ ನೋವ್ಯಾಕ್ಸ್ ಮತ್ತು ಭಾರತ್ ಬಯೋಟೆಕ್ ನ ನಾಸಲ್ ಲಸಿಕೆಗೆ ಈ ವರ್ಷ ಅನುಮತಿ ದೊರೆಯುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
ಅಮೆರಿಕ, ಯುರೋಪ್, ಬ್ರಿಟನ್ ಮತ್ತು ಜಪಾನ್ ಗಳಲ್ಲಿ ಕೆಲವೊಂದು ನಿರ್ಬಂಧಗಳ ಮೂಲಕ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. ಅದರಂತೆ ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿರುವ ತುರ್ತು ಬಳಕೆಯ ಲಸಿಕೆಗಳಿಗೆ ಭಾರತ ಕೂಡಾ ಅನುಮತಿ ನೀಡಲಿದೆ ಎಂದು ವರದಿ ತಿಳಿಸಿದೆ.