ನವದೆಹಲಿ: ದೇಶದ ಸಣ್ಣಪುಟ್ಟ ಉದ್ಯಮಗಳು ಕೂಡ ರಫ್ತು ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನಮ್ಮ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಣ್ಣ ಉದ್ಯಮ ಕ್ಷೇತ್ರಕ್ಕೆ ತಮ್ಮ ಸಾಮರ್ಥ್ಯವೇನೆಂದು ಅರಿಯುವಂಥ ಹೊಸ ನಿಯಮಾವಳಿಗಳನ್ನೂ ರೂಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುರುವಾರ “ಉದ್ಯಮಿ ಭಾರತ್’ ಯೋಜನೆಯಲ್ಲಿ ಸೂಕ್ಷ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆ(ಎಂಎಸ್‌ಎಂಇ)ಗಳಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ರಫ್ತು ಹೆಚ್ಚಬೇಕೆಂದರೆ ಹಾಗೂ ಭಾರತದ ಉತ್ಪನ್ನಗಳು ಹೊಸ ಮಾರುಕಟ್ಟೆಗಳಿಗೆ ತಲುಪಬೇಕೆಂದರೆ ಎಂಎಸ್‌ಎಂಇ ವಲಯವು ಬಲಿಷ್ಠಗೊಳ್ಳಬೇಕಾದ ಅಗತ್ಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ನಮ್ಮ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳು ಮತ್ತು ಹೊಸ ನಿಯಮಾವಳಿಗಳನ್ನು ರೂಪಿಸುತ್ತಿದೆ. ಈ ಕ್ಷೇತ್ರವನ್ನು ಪ್ರಬಲಗೊಳಿಸಿದರೆ ಇಡೀ ಸಮಾಜವನ್ನೇ ಬಲಿಷ್ಠಗೊಳಿಸಿದಂತೆ ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮೋದಿ ಅವರು “ರ್‍ಯಾಂಪ್'(ಎಂಎಸ್‌ಎಂಇ ಕಾರ್ಯಕ್ಷಮತೆ ಹೆಚ್ಚಳ ಮತ್ತು ವೇಗ ವರ್ಧಿಸುವ ಕಾರ್ಯಕ್ರಮ), ಮೊದಲ-ಬಾರಿಯ ಎಂಎಸ್‌ಎಂಇ ರಫ್ತುದಾರರ ಸಾಮರ್ಥ್ಯ ಹೆಚ್ಚಳ, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯ ಹೊಸ ಫೀಚರ್ ಮತ್ತಿತರ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಖಾದಿ ಸಾಧನೆಗೆ ಮೆಚ್ಚುಗೆ:
ಇದೇ ವೇಳೆ, ಇದೇ ಮೊದಲ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗದ ವಹಿವಾಟು 1 ಲಕ್ಷ ಕೋಟಿ ರೂ. ದಾಟಿದೆ. ಇದು ಸಾಧ್ಯವಾಗಲು ಗ್ರಾಮಗಳಲ್ಲಿರುವ ಸಣ್ಣ ಉದ್ದಿಮೆಗಳು ಹಾಗೂ ಹಗಲಿರುಳು ಶ್ರಮಿಸಿದ ನಮ್ಮ ಸಹೋದರಿಯರೇ ಕಾರಣ. ಕಳೆದ 8 ವರ್ಷಗಳಲ್ಲಿ ಖಾದಿ ಮಾರಾಟವೂ 4 ಪಟ್ಟು ಹೆಚ್ಚಳವಾಗಿದೆ ಎಂದೂ ಮೋದಿ ತಿಳಿಸಿದ್ದಾರೆ.