Advertisement

ಖಾಸಗಿ ಶಾಲೆಗಳು ಡೊನೇಷನ್, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ: ಶುಲ್ಕ ನಿಗದಿ ಮಾಡಿದ ಸರ್ಕಾರ

04:44 PM Jan 29, 2021 | Team Udayavani |

ಬೆಂಗಳೂರು: ಖಾಸಗಿ ಶಾಲೆಯ ಶುಲ್ಕ ನಿಗದಿಪಡಿಸಿದ ಸರ್ಕಾರ, ಪ್ರಸಕ್ತ ಸಾಲಿಗೆ ಸೀಮಿತಗೊಳಿಸಿ ರಾಜ್ಯದ ಯಾವುದೇ ಮಾದರಿ ಪಠ್ಯಕ್ರಮದ ಖಾಸಗಿ ಶಾಲೆಗಳು 2019ರಲ್ಲಿ ಪಡೆದ ಬೋಧನ ಶುಲ್ಕದ ಶೇ.75ರಷ್ಟು ಮಾತ್ರ ಪಡೆಯಬೇಕು. ಬೋಧನ ಶುಲ್ಕ ಹೊರತುಪಡಿಸಿ ಅಭಿವೃದ್ಧಿ ಶುಲ್ಕ ವಸೂಲಿ ಮಾಡುವಂತಿಲ್ಲ. ಟ್ರಸ್ಟ್ ಗೆ ಡೊನೇಷನ್ ತೆಗೆದುಕೊಳ್ಳಬಾರದು ಎಂದು ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

Advertisement

ಶುಕ್ರವಾರ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಈಗ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಎರಡು ಅಥವಾ ಮೂರು ಕಂತಿನಲ್ಲಿ ಪಾವತಿಸಲು ಅವಕಾಶ ನೀಡಬೇಕು. ಈ ಬಗ್ಗೆ ಶಾಲೆ ಹಾಗೂ ಪಾಲಕರಿಂದ ಬರುವ ದೂರು ನಿರ್ವಹಣೆಗೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಮಿತಿ ರಚನೆ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ: ಮೇ.24ರಿಂದ ಪರೀಕ್ಷೆ ಆರಂಭ

ಈ ಬಗ್ಗೆ ವಿಧಾನ ಪರಿಷತ್ ಸದಸ್ಯರು, ವಿವಿಧ ವಿಭಾಗದ ಶಾಲಾಡಳಿತ ಮಂಡಳಿಗಳು, ಕ್ಯಾಮ್ಸ್, ರುಪ್ಸಾ, ಐಸಿಎಸ್ಇ, ಸಿಬಿಎಸ್ಇ ಮಂಡಳಿಗಳ ಜತೆ ಚರ್ಚೆ ನಡೆಸಿದ್ದೇವೆ. ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ನೂರಕ್ಕೆ ನೂರು ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಡಿ ಶುಲ್ಕ ನಿಯಂತ್ರಣಕ್ಕೆ ಸರ್ಕಾರಕ್ಕೆ ಹಕ್ಕಿದೆ. ಈ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.

ಸಾರ್ವಜನಿಕ ಇಲಾಖೆ ಖಾಸಗಿ ಶಾಲೆ ಶುಲ್ಕ ನಿರ್ಧಾರ ವಿಚಾರವಾಗಿ ಪಾಲಕರು ಹಾಗೂ ಆಡಳಿತ ಮಂಡಳಿಯ ಆಕ್ಷೇಪಣೆಗಳನ್ನು ಕ್ರೋಡೀಕರಿಸಿದ್ದೇವೆ. ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲಿ ಒಂದು ಕಂತಿನ ಹಣ ಕಟ್ಟಲು ಹೇಳಿದ್ದೇವೆ. ಆನ್ ಲೈನ್ ಶಿಕ್ಷಣ ಸ್ಥಗಿತ, ಎರಡನೇ ಕಂತಿನ ಹಣ ಇತ್ಯಾದಿ ವಿಚಾರವಾಗಿ ದೂರು ಬರುತ್ತಿವೆ. ಶಿಕ್ಷಣ ಇಲಾಖೆ ಯಾರ ಕತ್ತು ಹಿಸುಕುವುದಿಲ್ಲ. ಯಾರ ಲಾಬಿಗೂ ಶರಣಾಗುವುದಿಲ್ಲ. ಕೋವಿಡ್ ನಿಂದ ಶಾಲೆ ಮತ್ತು ಪಾಲಕರ ನಡುವಿನ ಸಂಬಂಧ ಹಾಳಾಗಿದೆ. ಸೀಟಿಗಾಗಿ ಪರದಾಡುತ್ತಿದ್ದ ಪಾಲಕರು ಇಂದು ಅದೇ ಶಾಲೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ಶಾಲಾ ಮೇಲುಸ್ತುವಾರಿ ಸಮಿತಿಯನ್ನು ಖಾಸಗಿ ಶಾಲೆಗಳು ಸಮರ್ಥವಾಗಿ ಮಾಡಿಲ್ಲ ಎಂದು ಹೇಳಿದರು.

Advertisement

2020-21ನೇ ಶೈಕ್ಷಣಿಕ ಸಾಲಿನಲ್ಲಿ ಶೇ.75 ಕ್ಕಿಂತ ಹೆಚ್ಚಿನ ಶುಲ್ಕ ಪಡೆದಿದ್ದಲ್ಲಿ 2021-22ನೇ ಸಾಲಿನಲ್ಲಿ ಪಾವತಿಸಬೇಕಾದ ಶುಲ್ಕಕ್ಕೆ ಹೊಂದಾಣಿಕೆಯನ್ನು ಮಾಡಿಕೊಳ್ಳಬಹುದು. ಯಾವುದೇ ಶಿಕ್ಷಣ ಸಂಸ್ಥೆ ಶೇ.75 ಕ್ಕಿಂತ ಕಡಿಮೆ ಶುಲ್ಕವನ್ನು ವಿಧಿಸಲು ಇಚ್ಛಿಸಿದಲ್ಲಿ, ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next