ನವದೆಹಲಿ: ನಟ ಫವಾದ್ ಖಾನ್ ಮತ್ತು ಮಹೀರಾ ಖಾನ್ ನಟಿಸಿರುವ ಪಾಕಿಸ್ತಾನಿ ಸಿನಿಮಾ “ದ ಲೆಜೆಂಡ್ ಆಫ್ ಮೌಲಾ ಜಟ್(The Legend Of Maula Jatt) ಸಿನಿಮಾ ಭಾರತದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಅವಕಾಶ ಇಲ್ಲ ಎಂದು ವರದಿ ತಿಳಿಸಿದೆ.
2019ರಿಂದ ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಫವಾದ್ ಖಾನ್ ಮತ್ತು ಮಹೀರಾ ಖಾನ್ ಅಭಿನಯದ ದ ಲೆಜೆಂಡ್ ಆಫ್ ಮೌಲಾ ಜಟ್ ಸಿನಿಮಾ 2022ರಲ್ಲಿ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ ಹಿಟ್ ಆಗಿತ್ತು. ಇದು 1979ರಲ್ಲಿ ಬಿಡುಗಡೆಗೊಂಡಿದ್ದ ಕಲ್ಟ್ ಕ್ಲಾಸಿಕ್ ಮೌಲಾ ಜಟ್ ಸಿನಿಮಾದ ರೀಮೇಕ್ ಆಗಿದೆ.
ಈ ಸಿನಿಮಾ ಅಕ್ಟೋಬರ್ 2ರಂದು ಝೀ ಸ್ಟುಡಿಯೋಸ್ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಸುಮಾರು 13 ವರ್ಷಗಳ ಬಳಿಕ ಭಾರತದಲ್ಲಿ ಬಿಡುಗಡೆಗೊಂಡ ಮೊದಲ ಪಾಕಿಸ್ತಾನಿ ಸಿನಿಮಾ ಇದಾಗಿದೆ. ಆದರೆ ರಾಜಕೀಯ ಪಕ್ಷಗಳು ದ ಲೆಜೆಂಡ್ ಆಫ್ ಮೌಲಾ ಜಟ್ ಸಿನಿಮಾ ಬಿಡುಗಡೆಗೆ ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದವು.
ಮಹಾರಾಷ್ಟ್ರ ನವನಿರ್ಮಾಣ್ ಸೇನಾ ವರಿಷ್ಠ ರಾಜ್ ಠಾಕ್ರೆ, ಈ ಸಿನಿಮಾ ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸಿನಿಮಾ ಥಿಯೇಟರ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು. ಈ ಸಿನಿಮಾ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಭಾರತದಲ್ಲಿ ಎಲ್ಲಿಯೂ ಪ್ರದರ್ಶಿಸಲು ಕೇಂದ್ರ ಸರ್ಕಾರ ಅವಕಾಶ ನೀಡಬಾರದು ಎಂದು ವಿನಂತಿಸಿಕೊಂಡಿದ್ದರು.