ಹಾವೇರಿ/ಶಿಗ್ಗಾವಿ: ಕಂದಾಯ ದಾಖಲೆ ಪಡೆಯಲು ಜನಸಾಮಾನ್ಯರು ಮತ್ತು ರೈತರು ಹರಸಾಹಸ ಪಡಬೇಕಿತ್ತು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಕಂದಾಯ ಕ್ರಾಂತಿ ಮಾಡಿದೆ. ಜನರು ಕಚೇರಿಗೆ ಹೋಗಿ ಯಾರ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದರೋ ಈಗ ಅದೇ ಅಧಿಕಾರಿಗಳು ನಿಮ್ಮ ಮನೆಗೆ ಬಂದು ದಾಖಲೆ ಕೊಡುತ್ತಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕಂದಾಯ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ “ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆ ಪಡೆಯಲು ಕಚೇರಿಗೆ ಅಲೆದಾಡಬೇಕಿತ್ತು. ಅಲ್ಲಿ ದಾಖಲೆಗಳನ್ನು ಕೊಡಲು ವಿಳಂಬವಾಗುತ್ತಿತ್ತು. ತಪ್ಪು ದಾಖಲೆ ಕೊಡುವುದು, ಭ್ರಷ್ಟಾಚಾರದಿಂದ ಜನಸಾಮಾನ್ಯರು ಪರದಾಡುವಂತಾಗಿತ್ತು. ಕಂದಾಯ ದಾಖಲೆಗಳು ಮನೆಗೆ ಬರುತ್ತವೆಂದು ಯಾರೂ ನಿರೀಕ್ಷಿಸಿರಲಿಲ್ಲ. ಈಗ ರಾಜ್ಯದಲ್ಲಿ ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜನರ ಸಮಸ್ಯೆಗಳನ್ನರಿತು ಅದಕ್ಕೆ ಪರಿಹಾರ ಕಲ್ಪಿಸುವುದೇ ಜನಪರ ಸರ್ಕಾರ. ಈಗ ನಮ್ಮ ಸರ್ಕಾರ ಕಂದಾಯ ಕ್ರಾಂತಿ ಮಾಡಿದೆ. ಇದು ನಮ್ಮ ಸರ್ಕಾರದ ಸಾಧನೆ ಎಂದರು.
ಅತಿವೃಷ್ಟಿ, ನೆರೆ ಸಂದರ್ಭದಲ್ಲಿ ಹಾನಿಯಾಗುವ ಬೆಳೆಗಳಿಗೆ ಕೇಂದ್ರ ಸರ್ಕಾರ ಕೊಡುವ ಪರಿಹಾರವನ್ನೇ ಹಿಂದಿನ ಸರ್ಕಾರಗಳು ರೈತರಿಗೆ ಕೊಡುತ್ತಿದ್ದವು. ನಮ್ಮ ಸರ್ಕಾರ ಪರಿಹಾರ ದುಪ್ಪಟ್ಟು ಮಾಡಿದೆ. ಇದು ಜನಪರ-ಜೀವಂತ ಇರುವ ಸರ್ಕಾರ. ವಿಕಲಚೇತನರ ಮಾಸಾಶನ, ವಿಧವಾ ವೇತನ ಪಡೆಯಲು ಗ್ರಾಮ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಿದ್ದೇವೆ. ಸರ್ಕಾರದ ಸವಲತ್ತುಗಳು ಈಗ ಮನೆ ಬಾಗಿಲಲ್ಲಿ, ಊರುಗಳಲ್ಲಿಯೇ ಸಿಗುತ್ತಿವೆ. ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಮಾಡಿದ್ದೇವೆ. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೈಗಾರಿಕೆ, ನೀರಾವರಿ, ರಸ್ತೆಗಳು, ಕೆರೆಗಳ ಅಭಿವೃದ್ಧಿ ಮಾಡುವ ವಿಶಿಷ್ಟ ಬಜೆಟ್ ಕೊಟ್ಟಿದ್ದೇವೆ ಎಂದರು.
1,23,180 ದಾಖಲೆಗಳನ್ನು ಶಿಗ್ಗಾವಿ ಕ್ಷೇತ್ರದ ಜನರಿಗೆ ಈಗಾಗಲೇ ತಲುಪಿಸಿದ್ದೇವೆ. ಸವಣೂರು ಜನತೆಗೆ 42,112 ಪ್ರತಿಗಳು ಸಿಕ್ಕಿವೆ. ಗ್ರಾಮ ಒನ್ ಕೇಂದ್ರಗಳ ಮೂಲಕ 75 ಸಾವಿರ ಅರ್ಜಿಗಳಲ್ಲಿ 56 ಸಾವಿರ ಅರ್ಜಿ ವಿಲೇವಾರಿ ಮಾಡಲಾಗಿದೆ. ಬಾಕಿ ಅರ್ಜಿಗಳನ್ನು 15 ದಿನದೊಳಗೆ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಂಜೂರಾಗಿದ್ದು, ಏ.1ರಿಂದ ಕಾರ್ಯಾರಂಭವಾಗಲಿದೆ. ಯಾವುದಕ್ಕೆ ಹೋರಾಟ ಮಾಡಿದ್ದೇನೋ ಅದಕ್ಕೆ ಆಜ್ಞೆ ಮಾಡಿದ್ದೇನೆ. ಹಾಲು ಉತ್ಪಾದನೆ ಹೆಚ್ಚಿಸಲು ಆಕಳು ಕೊಡಲು ಪ್ರೋತ್ಸಾಹ ಧನ ಕೊಟ್ಟಿದ್ದೇವೆ. ಪ್ರತಿ ಗ್ರಾಪಂಗೆ ಮತ್ತೆ 50 ಮನೆಗಳನ್ನು ಕೊಡಲಿದ್ದೇವೆ. ರೇಷ್ಮೆ ಉತ್ಪಾದಕರಿಗೆ ರೇಷ್ಮೆ ಮಾರುಕಟ್ಟೆ ಮಾಡಲಿದ್ದೇವೆ. ಕೈಗಾರಿಕಾ ಟೌನ್‌ಶಿಪ್ ಮಾಡಿದ್ದೇವೆ. ಜಿಲ್ಲೆಯಲ್ಲಿ ಬಹುತೇಕ ಆರ್ಥಿಕ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.
ಜಿಲ್ಲಧಿಕಾರಿ ಸಂಜಯ ಶೆಟ್ಟಣ್ಣವರ, ಜಿಪಂ ಸಿಇಒ ಮೊಹಮ್ಮದ್ ರೋಷನ್, ಉಪವಿಭಾಗಾಕಾರಿ ಅನ್ನಪೂರ್ಣ ಮುದುಕಮ್ಮನವರ ಇತರರು ಇದ್ದರು.