ಕಾಪು: ಬೆಳಪು ಗ್ರಾಮದಲ್ಲಿ ಕಾಪು ತಾಲೂಕಿನ ಮೊತ್ತ ಮೊದಲ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳು ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ.
ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯಿಂದ ಮಂಜೂರಾತಿ ಪಡೆದು ಬೆಳಪು ಗ್ರಾಮದ 5.36 ಎಕರೆ ಸರಕಾರಿ ಜಮೀನಿನಲ್ಲಿ ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಯು ನಡೆದಿದ್ದು, ಕಾಪು ತಾಲೂಕು ಮತ್ತು ಬೆಳಪು ಗ್ರಾಮಕ್ಕೆ ಮುಕುಟ ಪ್ರಾಯದಂತಿದೆ. ನೆಲ ಮಹಡಿ ಮತ್ತು ಪ್ರಥಮ ಮಹಡಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡ ನಿರ್ಮಾಣ ಕಾಮಗಾರಿಯ ಜೊತೆಗೆ ವಿದ್ಯುತ್, ನೀರು ಸಹಿತವಾದ ಆವಶ್ಯಕ ಮೂಲ ಸೌಕರ್ಯಗಳನ್ನು ಅಳವಡಿಸಲಾಗಿದೆ.
ಎಐಸಿಟಿಇ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಕೆ: ಸರಕಾರಿ ಪಾಲಿಟೆಕ್ನಿಕ್ ವಿದ್ಯಾಲಯಗಳಲ್ಲಿ ಡಿಪ್ಲೋಮಾ ಕೋರ್ಸ್‌ಗಳನ್ನು ಪ್ರಾರಂಭಿಸಲು ಎಐಸಿಟಿಇ (ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್) ಸಂಸ್ಥೆಯು ಆರಂಭಿಕ ಅನುಮೋದನೆ ನೀಡಬೇಕಿದೆ. ಎಐಸಿಟಿಇ ಅನುಮೋದನೆ ದೊರಕಿದ ಬಳಿಕ ರಾಜ್ಯ ಸರಕಾರ ವಿವಿಧ ಕೋರ್ಸ್‌ಗಳು ಮತ್ತು ಹುದ್ದೆಗಳನ್ನು ಮಂಜೂರುಗೊಳಿಸಲಿದ್ದು, ಬೆಳಪು ಸರಕಾರಿ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ತಾಂತ್ರಿಕ ಶೈಕ್ಷಣಿಕ ತರಗತಿಗಳನ್ನು ಪ್ರಾರಂಭಿಸಲು ಸಂಬಂಧಪಟ್ಟ ವಿಭಾಗಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಇಲಾಖಾ ಮಂಜೂರಾತಿ ಮತ್ತು ಅನುಮೋದನೆ ದೊರಕಿದ ಕೂಡಲೇ ಕೋರ್ಸ್‌ಗಳನ್ನು ಗೊತ್ತು ಮಾಡಿ, ಸಿಬಂದಿಗಳನ್ನು ನೇಮಿಸುವುದರ ಜೊತೆಗೆ 2021-22ನೇ ಶೈಕ್ಷಣಿಕ ವರ್ಷದಲ್ಲಿ ತರಗತಿಗಳನ್ನು ಪ್ರಾರಂಭಿಸುವ ನಿರೀಕ್ಷೆ ಹೊಂದಲಾಗಿದೆ.
ಇದನ್ನೂ ಓದಿ:ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ: ಸದನದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಒತ್ತಾಯ
ಉಡುಪಿ ಜಿಲ್ಲೆಯ ಮೂರನೇ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್: ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಕಾರ್ಕಳದಲ್ಲಿ ಸರಕಾರಿ ಪಾಲಿಟೆಕ್ನಿಕ್ ವಿದ್ಯಾಲಯಗಳಿದ್ದು ಬೆಳಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಜಿಲ್ಲೆಗೆ ಮೂರನೇಯದಾಗಲಿದೆ. ಕಾಪು ತಾಲೂಕಿನ ಪ್ರಥಮ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸರಕಾರಿ ಕಾಲೇಜ್‌ಗಳನ್ನು ಹೊರತುಪಡಿಸಿ ನಿಟ್ಟೆಯಲ್ಲಿ ಒಂದು ಅನುದಾನಿತ ಪಾಲಿಟೆಕ್ನಿಕ್ ವಿದ್ಯಾಲಯ ಕಾರ್ಯ ನಿರ್ವಹಿಸುತ್ತಿದ್ದು, ಎರಡು ಖಾಸಗಿ ತಾಂತ್ರಿಕ ವಿದ್ಯಾಸಂಸ್ಥೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಪಿಟಿ, ಬಂಟ್ವಾಳ, ಬೋಂದೆಲ್‌ನಲ್ಲಿ ಮೂರು ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿವೆ. ಮೂಡಬಿದ್ರಿ, ಸುಂಕದಕಟ್ಟೆ ಮತ್ತು ಸುಳ್ಯದಲ್ಲಿ ಅನುದಾನಿತ ತಾಂತ್ರಿಕ ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ.
ಯಾವೆಲ್ಲಾ ಕೋರ್ಸ್‌ಗಳಿಗೆ ಅವಕಾಶ: ಪ್ರಸ್ತುತ ಮಣಿಪಾಲ ಮತ್ತು ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈಯನ್ಸ್ ಇಂಜಿನಿಯರಿಂಗ್, ಎಲೆಕ್ಟಾನಿಕ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ಕಾರ್ಯ ನಿರ್ವಹಿಸುತ್ತಿವೆ. ಬೆಳಪು ಕಾಲೇಜಿನಲ್ಲಿ ಇಲೆಕ್ಟಿಕಲ್ ಮತ್ತು ಇಲೆಕ್ಟಾನಿಕ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಲೆಕ್ಟಾನಿಕ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಆಟೋ ಮೊಬೈಲ್ ಇಂಜಿನಿಯರಿಂಗ್ ಸಹಿತವಾದ ನಾಲ್ಕು ಕೋರ್ಸ್‌ಗಳನ್ನು ಆರಂಭಿಸಲು ಚಿಂತನೆ ನಡೆದಿದೆ.
ಆನ್‌ಲೈನ್ ಮೂಲಕ ಸೀಟು ಹಂಚಿಕೆ: ಬೆಳಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಅದಕ್ಕಾಗಿ ಎಐಸಿಟಿಇ ಅಧಿಕೃತವಾಗಿ ನೊಟಿಫಿಕೇಷನ್ ಹೊರಡಿಸಲಿದೆ. ಆ ಬಳಿಕ ಆನ್‌ಲೈನ್ ವ್ಯವಸ್ಥೆಯಡಿ ವಿದ್ಯಾರ್ಥಿಗಳು ಸೀಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಪಡೆದುಕೊಳ್ಳಲು ಸೇರ್ಪಡೆಗೊಳ್ಳಲು ಅವಕಾಶವಿದೆ. ಕೆಟಗರಿ ಮತ್ತು ಮೀಸಲು ಮತ್ತು ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆಯಾಗಲಿದೆ. ಇಲ್ಲಿ ಸುಮಾರು 240 ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶವಿದ್ದು, ತರಗತಿ ಆರಂಭಕ್ಕೆ ಮೊದಲು ಪ್ರಾಂಶುಪಾಲರು, ರಿಜಿಸ್ಟ್ರಾರ್ ಸೇರಿದಂತೆ 86 ಹುದ್ದೆಗಳು ಸೃಷ್ಟಿಯಾಗಲಿದ್ದು, ಸಿಬಂದಿಗಳ ನೇಮಕಾತಿಗೂ ಸರಕಾರ ಮುತುವರ್ಜಿ ವಹಿಸಬೇಕಿದೆ.
ಸ್ಪೆಷಲ್ ಆಫೀಸರ್ ನಿಯೋಜನೆ: ಬೆಳಪು ಪಾಲಿಟೆಕ್ನಿಕ್ ವಿದ್ಯಾಲಯಕ್ಕೆ ಪ್ರಸ್ತುತ ಸ್ಪೆಷಲ್ ಆಫೀಸರ್ ಹುದ್ದೆ ಮಂಜೂರಾಗಿದ್ದು, ಮಣಿಪಾಲದಲ್ಲಿರುವ ಉಡುಪಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಸಿ.ಪಿ. ಗಣಪತಿ ಅವರನ್ನು ಸ್ಪೆಷಲ್ ಆಫೀಸರ್ ಆಗಿ ನಿಯೋಜನೆ ಮಾಡಲಾಗಿದ್ದು, ಅವರದ್ದೇ ಮೇಲುಸ್ತುವಾರಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿದೆ. ಬೆಂಗಳೂರಿನ ರೈಟ್ಸ್ ಸಂಸ್ಥೆಯು ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಕೋವಿಡ್ ಭೀತಿಯ ನಡುವೆಯೂ ಕಾಮಗಾರಿ ಪೂರ್ಣಗೊಳಿಸಿ, ಮೆಚ್ಚುಗೆಗೆ ಪಾತ್ರವಾಗಿದೆ.
ಏನೆಲ್ಲಾ ವ್ಯವಸ್ಥೆಗಳು ಜೋಡಣೆಗೆ ಬಾಕಿ: ಬೆಳಪು ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣ ಗೊಂಡಿದ್ದು, ಮುಂದೆ ಕಂಪ್ಯೂಟರ್ ವ್ಯವಸ್ಥೆ, ಫರ್ನೀಚರ್ಸ್, ಹವಾನಿಯಂತ್ರಿತ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿತ ಮಿಷನರಿ ವ್ಯವಸ್ಥೆಗಳ ಜೋಡಣೆ, ವರ್ಕ್‌ಶಾಪ್ ಜೋಡಣೆ, ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್, ಪ್ರಾಂಶುಪಾಲರು ಮತ್ತು ಸಿಬಂದಿಗಳಿಗೆ ವಸತಿ ನಿಲಯ, ಕ್ಯಾಂಟೀನ್, ಭದ್ರತಾ ವ್ಯವಸ್ಥೆಗಳ ಜೋಡಣೆ, ಕಟ್ಟಡದ ಸುತ್ತಲೂ ಕಂಪೌಂಡ್ ಮತ್ತು ಗೇಟ್ ಅಳವಡಿಕೆ ನಿರ್ಮಾಣ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿದೆ.
ನಾಲ್ಕು ಕೋರ್ಸ್‌ಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಕೆ: ಬೆಳಪುವಿನ ತಾಂತ್ರಿಕ ವಿದ್ಯಾಲಯದಲ್ಲಿ ಇಲೆಕ್ಟಿಕಲ್ ಮತ್ತು ಇಲೆಕ್ಟಾನಿಕ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಲೆಕ್ಟಾನಿಕ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಆಟೋ ಮೊಬೈಲ್ ಇಂಜಿನಿಯರಿಂಗ್ ಸಹಿತವಾದ ನಾಲ್ಕು ಕೋರ್ಸ್‌ಗಳನ್ನು ಆರಂಭಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದೆ ಎಐಸಿಟಿಇ ವಿಭಾಗ ಮಂಜೂರಾತಿ ದೊರಕಬೇಕಿದೆ. ಶೀಘ್ರ ತಾಂತ್ರಿಕ ಅನುಮೋದನೆ ಲಭಿಸುವ ನಿರೀಕ್ಷೆಯಿದೆ.
ಸಿ.ಪಿ. ಗಣಪತಿ, ವಿಶೇಷಾಧಿಕಾರಿ, ಬೆಳಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜು
ಸ್ಥಳೀಯರಿಗೆ ಆದ್ಯತೆ ನೀಡಲು ಮನವಿ: ಬೆಳಪು ಗ್ರಾಮವು ಶೈಕ್ಷಣಿಕ ಗ್ರಾಮವಾಗಿ ಬೆಳೆಯಬೇಕೆಂಬ ಗ್ರಾಮಸ್ಥರ ಬಹುಕಾಲದ ಕನಸೊಂದು ನನಸಾಗುತ್ತಿದೆ. ರಾಜ್ಯ ಸರಕಾರ, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಪೂರ್ಣ ಸಹಕಾರದಿಂದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು 2021-22ನೇ ಶೈಕ್ಷಣಿಕ ವರ್ಷದಿಂದ ತರಗತಿಗಳು ಆರಂಭಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ತರಗತಿ ಪ್ರಾರಂಭಕ್ಕೆ ಬೇಕಿರುವ ವ್ಯವಸ್ಥೆಗಳ ಜೋಡಣೆ, ಶಿಕ್ಷಣಾವಕಾಶ ಮತ್ತು ಉದ್ಯೋಗಾವಕಾಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲು ಸರಕಾರ ಮತ್ತು ಇಲಾಖೆಗೆ ಮನವಿ ಮಾಡಲಾಗುವುದು.
ಡಾ| ದೇವಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್