ಹೊಸದಿಲ್ಲಿ : ರಸ್ತೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನೈಟ್ರೋಜನ್ ತುಂಬಿದ ಟೈರ್ ಬಳಕೆಯನ್ನು ಕಡ್ಡಾಯ ಮಾಡುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ.
ಅದಕ್ಕಾಗಿ ನೈಟ್ರೋಜನ್ ತುಂಬಲಾಗುವ, ರಬ್ಬರ್-ಸಿಲಿಕಾನ್ ಮಿಶ್ರಣದ ಉತ್ತಮ ಗುಣಮಟ್ಟದ ಟೈರ್ ಉತ್ಪಾದನೆಯನ್ನು ಕಡ್ಡಾಯಗೊಳಿಸುವುದನ್ನು ಸರಕಾರ ಚಿಂತಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇಂದು ಸೋಮವಾರ ರಾಜ್ಯಸಭೆಗೆ ತಿಳಿಸಿದರು.
ನೋಯ್ಡಾ – ಆಗ್ರಾ ಹೈವೆಯಲ್ಲಿ ಇಂದು 29 ಪ್ರಯಾಣಿಕರನ್ನು ಬಲಿ ಪಡೆದು ಸಂಭವಿಸಿರುವ ಭೀಕರ ರಸ್ತೆ ಅಪಘಾತ ಅತ್ಯಂತ ದುರದೃಷ್ಟಕರ ಎಂದು ಹೇಳಿದ ಸಚಿವ ಗಡ್ಡರಿ, ಉತ್ತರ ಪ್ರದೇಶ ಸರಕಾರ ಈಗಾಗಲೇ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು ಅವಘಡದ ಹಿಂದಿನ ಕಾರಣಗಳನ್ನು ತಿಳಿಯಲಾಗುವುದು ಎಂದು ಹೇಳಿದರು.
ಯಮುನಾ ಎಕ್ಸ್‌ಪ್ರೆಸ್ ವೇ ಯನ್ನು ಉತ್ತರ ಪ್ರದೇಶ ಸರಕಾರವೇ ನಿರ್ಮಿಸಿದ್ದು ಅದಕ್ಕೂ ಕೇಂದ್ರ ಸರಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಗಡ್ಕರಿ ಹೇಳಿದರು.