ಬೆಂಗಳೂರು: ರಾಜ್ಯದ ಬಿಲ್ಲವ/ಈಡಿಗ ಸಮುದಾಯಗಳ ಬಹುದಿನದ ಬೇಡಿಕೆಯಾಗಿದ್ದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಸರ್ಕಾರ ಆದೇಶ ಹೊರಡಿಸಿದೆ
ಈ ಬಗ್ಗೆ ಮುಖ್ಯಮಂತ್ರಿ ಬಸವವಾರಜ ಬೊಮ್ಮಾಯಿ ಅವರು ಮಾಹಿತಿ ನೀಡಿದ್ದು, ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶ ಹೊರಡಿಸಿದ್ದು, ಈ ನಿಗಮವು ಈಡಿಗ/ಬಿಲ್ಲವ ಸೇರಿದಂತೆ ಇತರ ಪ್ರಮುಖ 26 ಉಪಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸಲಿದೆ ಎಂದಿದ್ದರು.
ಸರ್ಕಾರದ ಆದೇಶದಲ್ಲಿ ಹೊಸ ಕೆನೆಪದರ ಮತ್ತು ಭಾರತದ ಸಂವಿಧಾನದ ಅನುಚ್ಛೇದ-15(4)ರಂತೆ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಮತ್ತು 16(4)ರ ಮೇರೆಗೆ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಕಲ್ಪಿಸಲು ಹಿಂದುಳಿದ ವರ್ಗಗಳನ್ನು ಗುರುತಿಸಿ ಜಾತಿ ವಟ್ಟಿಯನ್ನು ಹೊರಡಿಸಲಾಗಿರುತ್ತದೆ. ಅದರನ್ವಯ ಸದರಿ ಜಾತಿ ಪಟ್ಟಿಯಲ್ಲಿ ಪವರ್ಗ 2ಎ’ಯ ಕ್ರಮಸಂಖ್ಯೆ 4(a)ಯಿಂದ (z)ವರೆಗೆ ನಮೂದಾಗಿರುವ ಈಡಿಗ ಸೇರಿದಂತೆ ಒಟ್ಟು 26 ಜಾತಿಗಳಿಗೆ ಶೈಕ್ಷಣಿಕ ಹಾಗೂ ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಚಿವ ಸುನಿಲ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಬಿಲ್ಲವ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಹೆಸರಿನಲ್ಲಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂಬುದು ಸಮುದಾಯದ ಬಹುದಿನಗಳ ಬೇಡಿಕೆಯಾಗಿತ್ತು. ಸಮುದಾಯದ ಕನಸನ್ನು ನನಸು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.