ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಬುಧವಾರ (ಸೆಪ್ಟೆಂಬರ್ 28) ಶೇ.34ರಿಂದ ಶೇ.38ಕ್ಕೆ ಏರಿಕೆ ಮಾಡಲಾಗಿದೆ. ಈ ನಿರ್ಧಾರದಿಂದಾಗಿ ದೇಶಾದ್ಯಂತ 50 ಲಕ್ಷಕ್ಕಿಂತ ಅಧಿಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಇದನ್ನೂ ಓದಿ:ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್?
ಭಾರತ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ವರ್ಷದಲ್ಲಿ ಎರಡು ಬಾರಿ ಅಥವಾ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆಯನ್ನು ನೀಡುತ್ತದೆ. ಈ ಹಿಂದೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 18 ತಿಂಗಳ ತುಟ್ಟಿ ಭತ್ಯೆಯನ್ನು ಪಾವತಿಸುವಂತೆ ಸರ್ಕಾರಕ್ಕೆ ಪತ್ರ ಬರೆದು ಒತ್ತಡ ಹೇರಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ತುಟ್ಟಿಭತ್ಯೆ ಹೆಚ್ಚಳದ ಹೊರತಾಗಿಯೂ ಕೇಂದ್ರ ಸಚಿವ ಸಂಪುಟವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಡಿಸೆಂಬರ್ ವರೆಗೆ ಮುಂದುವರಿಸಲು ನಿರ್ಧರಿಸಿದೆ. ಇದರಿಂದಾಗಿ ರಾಜ್ಯಗಳ ಬೊಕ್ಕಸಕ್ಕೆ ಅಂದಾಜು 40,000 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಅನುಮೋದನೆ ನೀಡಿರುವುದಾಗಿ ವರದಿ ತಿಳಿಸಿದೆ.