Advertisement

ಸಿಬಂದಿ ಕೊರತೆ ಇದ್ದರೂ ಮಳೆಗಾಲಕ್ಕೆ ಸಿದ್ಧ

06:00 AM Jun 17, 2018 | Team Udayavani |

ಪಡುಬಿದ್ರಿ: ಸಿಬಂದಿ ಕೊರತೆ ಇದ್ದರೂ, ಮಳೆಗಾಲದ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟಲು ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ಸಿದ್ಧವಾಗಿದೆ. ಈ ಆರೋಗ್ಯ ಕೇಂದ್ರ ಮುದರಂಗಡಿ, ಸಾಂತೂರು, ಪಲಿಮಾರು, ನಂದಿಕೂರು ಹಾಗೂ ಎಲ್ಲೂರು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಈ ಆರೋಗ್ಯ ಕೇಂದ್ರದಲ್ಲಿ ಮತ್ತು ಆರು ಉಪಕೇಂದ್ರಗಳ ಪೈಕಿ ಎಲ್ಲೂರು “ಬಿ’ ಹಾಗೂ ಸಾಂತೂರು ಉಪ ಕೇಂದ್ರಗಳಲ್ಲಿ ಕಿರಿಯ ಆರೋಗ್ಯ ಸಹಾಯಕಿಯರ ಹುದ್ದೆಗಳು ಇನ್ನೂ ತುಂಬಿಲ್ಲ. 
 
ಮಲೇರಿಯಾ ಮಾಸಾಚರಣೆ 
ಜೂನ್‌ ತಿಂಗಳಿನಿಂದ ಮಲೇರಿಯಾ ಮಾಸಾಚರಣೆ ಯನ್ನು ಆರೋಗ್ಯ ಕೇಂದ್ರದಿಂದ ಆರಂಭಿಸಲಾಗಿದೆ.  ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರ ಸಹಕಾರದಿಂದ ವಿವಿಧ ಅಂಗನವಾಡಿಗಳಲ್ಲಿ ಮಲೇರಿಯಾ ಕುರಿತಾದ ಮಾಹಿತಿ, ಪ್ರತಿಬಂಧಕವಾಗಿ ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗೆಗೆ ವಿವರಿಸಲಾಗುತ್ತಿದೆ. 
 
ಮಲೇರಿಯಾ, ಡೆಂಗ್ಯೂ ವರದಿಯಾಗಿಲ್ಲ

ಮುದರಂಗಡಿ ಗ್ರಾ. ಪಂ. ಪ್ರದೇಶಗಳಲ್ಲಿ ಯಾವುದೇ ಭಾರೀ ಕೊಳಚೆ ಸಮಸ್ಯೆಗಳಿಲ್ಲ. ಹಾಗಾಗಿ  ಪ್ರಾ. ಆ. ಕೇಂದ್ರ ವ್ಯಾಪ್ತಿಯಲ್ಲಿ ಸೊಳ್ಳೆ ಉತ್ಪಾದನೆಯ ತಾಣಗಳೂ ಇಲ್ಲ. ಇದುವರೆಗೆ ಮಲೇರಿಯಾ ಸೇರಿದಂತೆ ಯಾವುದೇ ಜ್ವರಬಾಧೆ ವರದಿಯಾಗಿಲ್ಲ. ಕಳೆದ ವರ್ಷವೂ ಪ್ರಾಥಮಿಕ ಆರೋಗ್ಯ ಕೇಂದ್ರ ಮುದರಂಗಡಿಯ ವ್ಯಾಪ್ತಿಯಲ್ಲಿ ಮಲೇರಿಯಾ, ಡೆಂಗ್ಯೂ ಜ್ವರಬಾಧೆ ಪ್ರಕರಣ ಗಳು ವರದಿಯಾಗಿಲ್ಲ. 

Advertisement

ವೈದ್ಯರ ಲಭ್ಯತೆ
ದಿನಕ್ಕೆ 30 – 40 ಹೊರ ರೋಗಿಗಳನ್ನು ಪರಿಶೀಲಿಸಲಾಗುತ್ತಿದೆ. ಔಷಧಗಳ ಪೂರೈಕೆ ಸಮರ್ಪಕವಾಗಿದೆ.  ಔಷಧಗಳ ವ್ಯತ್ಯಯವಾದಲ್ಲಿ ರಾಷ್ಟ್ರೀಯ ಗ್ರಾಮೀಣ ಹೆಲ್ತ್‌ ಮಿಷನ್‌ನಡಿ ಆರೋಗ್ಯ ರಕ್ಷಾ ಸಮಿತಿಯಡಿ  ಜನೌಷಧಿ ಕೇಂದ್ರಗಳಿಂದ ಖರೀದಿಸಿ ರೋಗಿಗಳಿಗೆ ನೀಡಲಾಗುತ್ತಿದೆ. ಪ್ರಾ. ಆ. ಕೇಂದ್ರದಲ್ಲಿ 6 ಬೆಡ್‌ಗಳಿದ್ದು ಹೊರ ರೋಗಿಗಳಿಗೆ ಅಗತ್ಯವಿದ್ದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಶುಶ್ರೂಷೆಯನ್ನು ನೀಡಲಾಗುತ್ತಿದೆ. ಆರೋಗ್ಯಾಧಿಕಾರಿ ಅವರೂ ರಾತ್ರಿ ತುರ್ತು ಸಂದರ್ಭಗಳಲ್ಲಿ ಲಭ್ಯರಿರುತ್ತಾರೆ.

ಸಿಬಂದಿ ಕೊರತೆ
ಕೇಂದ್ರದಲ್ಲಿ ಸಿಬಂದಿ ಕೊರತೆ ಇದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯನ್ನು ನೀಡಲು ನಮ್ಮ ಆರೋಗ್ಯ ಕೇಂದ್ರ ಸಜ್ಜಾಗಿದೆ.  
– ಡಾ| ಸುಬ್ರಹ್ಮಣ್ಯ ಪ್ರಭು, 
ವೈದ್ಯಾಧಿಕಾರಿ

ಯಾವೆಲ್ಲ ಸಿಬಂದಿ ಇಲ್ಲ?
ಮುದರಂಗಡಿ ಪ್ರಾ. ಆ. ಕೇಂದ್ರದಲ್ಲಿ ಮೂವರು ಕಿರಿಯ ಪುರುಷ ಆರೋಗ್ಯ ಸಹಾಯಕರು, ಓರ್ವ ಹಿರಿಯ ಪುರುಷ ಆರೋಗ್ಯ ಸಹಾಯಕ, ಎಫ್‌ಡಿಸಿ ಹಾಗೂ ಫಾರ್ಮಸಿಸ್ಟ್‌ ಗಳ ಕೊರತೆ ಇದೆ. 

– ಆರಾಮ

Advertisement
Advertisement

Udayavani is now on Telegram. Click here to join our channel and stay updated with the latest news.

Next