ನವದೆಹಲಿ: ಪ್ರಸ್ತುತ ದೇಶದಲ್ಲಿ ಯಾವುದೇ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂನ್ನು ನಿರ್ಬಂಧಿಸುವ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿನಲ್ಲಿ ಖಚಿತ ಪಡಿಸಿದೆ.
ಹೊಣೆಗಾರಿಕೆ ಸೇರಿದಂತೆ ಬಳಕೆದಾರರ ಸುರಕ್ಷತೆ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮ ಕಂಪನಿಗಳ ಜೊತೆಗೆ ನಿಯಮಿತವಾಗಿ ಸರ್ಕಾರ ಸಂವಾದ ನಡೆಸುತ್ತಿದೆ.
ದೇಶದ ಜನರಲ್ಲಿ ದ್ವೇಷಕಾರಿ, ಕೆಟ್ಟ ಮನೋಭಾವ ಬೆಳೆಸಲು ಕೆಲ ಬಳಕೆದಾರರು ಸಾಮಾಜಿಕ ಮಾಧ್ಯಮ ಫ್ಲಾಟ್ ಫಾರಂಗಳನ್ನು ದುರುಪಯೋಗಪಡಿಸಿಕೊಳ್ಳುವ ಮಧ್ಯೆ, ಯಾವುದೇ ಸಾಮಾಜಿಕ ಮಾಧ್ಯಮ ಅಥವಾ ಇತರೆ ಯಾವುದೇ ಮಧ್ಯವರ್ತಿಗಳಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಲು ಸಾಧ್ಯವಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷಕಾರಿ ಅಂಶಗಳ ಬಗ್ಗೆ ಬಳಕೆದಾರರರಿಂದ ವಿವಿಧ ದೂರುಗಳನ್ನು ಸರ್ಕಾರ ಸ್ವೀಕರಿಸಿದ್ದು, ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದೆ, ಸದ್ಯ ದೇಶದಲ್ಲಿ ಯಾವುದೇ ಸಾಮಾಜಿಕ ಮಾಧ್ಯ ಫ್ಲಾಟ್ ಫಾರಂಗಳನ್ನು ನಿರ್ಬಂಧಿಸುತ್ತಿಲ್ಲ ಎಂದು ಅವರು ಹೇಳಿದರು.
ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ದೇಶದ ರಕ್ಷಣೆ, ಭದ್ರತೆ, ಏಕತೆ ಮತ್ತು ಸಾರ್ವಭೌಮತ್ವ ವಿದೇಶಗಳೊಂದಿಗೆ ಸ್ನೇಹಪೂರ್ವಕ ಸಂಬಂಧ ಅಥವಾ ಕಾನೂನು ಹಿತದೃಷ್ಟಿಯಿಂದ ದುರುದ್ದೇಶಪೂರಿತ ಆನ್‌ಲೈನ್ ವಿಷಯಗಳನ್ನು ಸರ್ಕಾರ ನಿರ್ಬಂಧಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸುವ ನೀತಿ ರೂಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರದ ನೀತಿಗಳು ನ್ಯಾಯಯುತ, ಮುಕ್ತ ಮತ್ತು ವಿಶ್ವಾಸಾರ್ಹ ಅಂತರ್ಜಾಲವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿವೆ ಮತ್ತು 2000 ಐಟಿ ಕಾಯ್ದೆ ಮತ್ತು ನಿಯಮಗಳು ಸೇರಿದಂತೆ ದೇಶದ ಕಾನೂನುಗಳನ್ನು ಪಾಲಿಸುವ ಮಧ್ಯವರ್ತಿಗಳಿಗೆ ದೇಶದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.