ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ದರ ನಿಗದಿ ಪಡಿಸಿದೆ.
ಇಂದು ಸರ್ಕಾರ ಕೋವಿಡ್ ಸೋಂಕಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸೆಗೆ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಖಾಸಗಿ ಆಸ್ಪತ್ರೆಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ತಪ್ಪಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ.
ಹೀಗಿದೆ ದರ ಪಟ್ಟಿ:
ಸರ್ಕಾರ ಅಧೀನದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಜನರಲ್ ವಾರ್ಡ್‌ಗೆ ಪ್ರತಿ ದಿನಕ್ಕೆ 5200 ರೂ. ನೀಡಬೇಕಾಗಿದೆ. ಅದೇ ರೀತಿ ಎಚ್‌ಡಿಯು ವಾರ್ಡ್ ದಿನವೊಂದಕ್ಕೆ 7000 ರೂಪಾಯಿ, ಐಸಿಯುವಿಗೆ 8,500, ವೆಂಟಿಲೇಟರ್ ಇರುವ ಐಸಿಯುಗೆ 10,000 ನಿಗದಿ ಮಾಡಲಾಗಿದೆ.
ಇದೇ ರೀತಿ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಕೋವಿಡ್- 19 ರೋಗಿಗಳಿಗೆ ಜನರಲ್ ವಾರ್ಡ್‌ಗೆ ದಿನವೊಂದಕ್ಕೆ 10,000 ರೂ, ಎಚ್‌ಡಿಯುಗೆ 12,000 ರೂ., ಐಸಿಯುವಿಗೆ 15,000 ರೂ. ಹಾಗೂ ವೆಂಟಿಲೇಟರ್ ಸಹಿತ ಐಸಿಯುಗೆ ದಿನಕ್ಕೆ 25,000 ರೂಪಾಯಿ ನಿಗದಿಪಡಿಸಲಾಗಿದೆ.
ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತ ರೋಗಿಗಳಿಗೆ ಮೀಸಲಿಡಬೇಕು. ಸರ್ಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.