ಜುನಾಗಢ: ಸಾವಯವ ಉತ್ಪನ್ನಗಳು ಮತ್ತು ರಫ್ತು ಉತ್ತೇಜನಕ್ಕೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿರುವ ರಾಷ್ಟ್ರೀಯ ಮಟ್ಟದ ಬಹು ರಾಜ್ಯ ಸಹಕಾರಿ ಸಂಘಗಳು ಮುಂದಿನ 10 ವರ್ಷಗಳಲ್ಲಿ ರೈತರ ಆದಾಯವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಸಹಾಯ ಮಾಡಲಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಹೇಳಿದರು.
ಗುಜರಾತ್‌ನ ಜುನಾಗಢದಲ್ಲಿ ರೈತ ಉತ್ಪನ್ನ ಮಾರುಕಟ್ಟೆ ಸಮಿತಿಯ(ಎಪಿಎಂಸಿ) “ಕಿಸಾನ್ ಭವನ’ವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, “ರೈತರು ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಇದು ರೈತರ ಆದಾರ ಅಧಿಕಗೊಳಿಸಲಿದೆ. ಮಣ್ಣನ್ನು ಸಂರಕ್ಷಿಸಲಿದೆ ಮತ್ತು ರಾಸಾಯನಿಕ ಗೊಬ್ಬರದಿಂದ ಉಂಟಾಗುವ ಹಾನಿಯಿಂದ ಪರಿಸರವನ್ನು ರಕ್ಷಿಸಲಿದೆ,’ ಎಂದರು.
“ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಮುಂದಿನ 10 ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳಲಿದೆ,’ ಎಂದು ಅಮಿತ್ ಶಾ ಭರವಸೆ ನೀಡಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಪತ್ನಿ ಸಹಿತ ಗಿರ್ ಸೋಮನಾಥ ಜಿಲ್ಲೆಯಲ್ಲಿರುವ ಸೋಮನಾಥ ದೇಗುಲದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿದರು.