ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುತ್ತಿರುವ ಸ್ಥಳಗಳನ್ನು ಗುರುತಿಸಿ ಕಟ್ಟುನಿಟ್ಟಾಗಿ ಸೀಲ್ ಡೌನ್ ಮಾಡಲು ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿಗಳ ಸಭೆ ಬಳಿಕ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್, ಕಲಾಸಿಪಾಳ್ಯ, ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆ ಪ್ರದೇಶಗಳಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದ್ದು, ಆ ಸ್ಥಳಗಳನ್ನು ಸೀಲ್ ಡೌನ್ ಮಾಡಲಾಗುವುದು ಎಂದು ಹೇಳಿದರು.
ಸಿದ್ದಾಪುರ, ಕಲಾಸಿಪಾಳ್ಯ, ವಿದ್ಯಾರಣ್ಯಪುರ, ಯಲಹಂಕ, ಧರ್ಮರಾಯನ ದೇವಸ್ಥಾನ ವಾರ್ಡ್ ಗಳಲ್ಲಿ ಹೆಚ್ಚು ಪ್ರಕರಣ ಪತ್ತೆಯಾದ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗುವುದು ಎಂದು ತಿಳಿಸಿದರು.
ಸೋಂಕು ಹೆಚ್ಚಾಗುತ್ತಿರುವ ಸ್ಥಳಗಳನ್ನು ಲಾಕ್ ಡೌನ್ ಮಾಡುವುದಾಗಿ ಆರ್.ಅಶೋಕ್ ಹೇಳಿದರು. ಆದರೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಲಾಕ್ ಡೌನ್ ಅಗತ್ಯವಿಲ್ಲ, ಸೀಲ್ ಡೌನ್ ಮಾತ್ರ ಎಂದು ಹೇಳಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾದಂತಾಗಿದೆ.
ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಟ್ರ್ಯಾಕಿಂಗ್ ಮಾಡುತ್ತಾರೆಂಬ ಕಾರಣದಿಂದ ಮೊಬೈಲ್ ಅನ್ನು ಮನೆಯಲ್ಲಿ ಬಿಟ್ಟು ಬೀದಿ ಸುತ್ತುವ ಬಗ್ಗೆ ಮಾಹಿತಿ ದೊರೆತಿದ್ದು, ಅಂತವರ ಬಗ್ಗೆ ಕ್ರಿಮಿನಲ್ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ಅಶೋಕ್ ಹೇಳಿದರು.
ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡುವ ಬಗ್ಗೆ ನಿಗಧಿತ ದರದ ಬಗ್ಗೆ ಇಂದು ಸಂಜೆ ಆದೇಶ ಹೊರಡಿಸಲಾಗುವುದು. ನಾಳೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುವುದು ಎಂದರು.