ನವದೆಹಲಿ: ದೇಶದ ಆರ್ಥಿಕಾಭಿವೃದ್ಧಿಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹಲವು ಮಹತ್ವದ ನಿರ್ಧಾರಗಳಲ್ಲಿ ಅಗ್ಗದ ಹಾಗೂ ಮಧ್ಯಮ ವರ್ಗದ ಮನೆಗಳ ನಿರ್ಮಾಣಕ್ಕೆ ಭಾರೀ ಪ್ರಮಾಣದ ಆರ್ಥಿಕ ನೆರವು ಘೋಷಿಸಿದ್ದಾರೆ.
ಅಗ್ಗದ ಹಾಗೂ ಅಪೂರ್ಣಗೊಂಡಿರುವ ಗೃಹ ಯೋಜನೆಗಾಗಿ 20 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಅಪೂರ್ಣಗೊಂಡಿರುವ ಗೃಹ ಯೋಜನೆ ಪೂರ್ಣಗೊಳಿಸಲು ಸಾಲ ಒದಗಿಸುವ ವಿಶೇಷ ಯೋಜನೆ ಆರಂಭಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ದೇಶದಲ್ಲಿ ಆರ್ಥಿಕಾಭಿವೃದ್ಧಿ ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಕುಸಿಯುತ್ತಿದೆ ಎಂದು ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಆರ್ಥಿಕ ಅಭಿವೃದ್ಧಿ ಕುರಿತು ಕೈಗೊಂಡ ಮಹತ್ವದ ನಿರ್ಧಾರವನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದರು.
ಗೃಹ ಯೋಜನೆಗಳಿಗಾಗಿ ವಿಶೇಷ ವಿಂಡೋದ ಮೂಲಕ ಆರ್ಥಿಕ ನೆರವು ನೀಡಲಾಗುವುದು. ಇದು ಅಗ್ಗದ ಮತ್ತು ಮಧ್ಯಮ ವರ್ಗದ ಮನೆ ನಿರ್ಮಾಣಕ್ಕಾಗಿ ಕೇಂದ್ರ ಕೈಗೊಂಡ ನಿರ್ಧಾರವಾಗಿದೆ ಎಂದರು.
ಮುಖ್ಯವಾಗಿ ಅಪೂರ್ಣಗೊಂಡಿರುವ ಯೋಜನೆಗಳಿಗೆ ಕೇಂದ್ರ ಸರಕಾರ ಹತ್ತು ಸಾವಿರ ಕೋಟಿ ರೂಪಾಯಿ ಆರ್ಥಿಕ ಪ್ರೋತ್ಸಾಹ ನೀಡಲಿದ್ದು, ಉಳಿದ 10 ಸಾವಿರ ಕೋಟಿ ರೂಪಾಯಿ ಹೂಡಿಕೆದಾರರು ನೀಡಲಿದ್ದಾರೆ ಎಂದು ವಿವರಿಸಿದರು.
ವಿದೇಶ ನೇರ ಬಂಡವಾಳ ಹೂಡಿಕೆ(ಎಫ್ ಡಿಐ)ಯ ಪ್ರಮಾಣ ಈಗ ಹೆಚ್ಚಾಗಿದ್ದು, ಇದು ಆರ್ಥಿಕ ಪುನಶ್ಚೇತನದ ಸಂಕೇತವಾಗಿದೆ. ಅಲ್ಲದೇ ವಿದೇಶಿ ವಿನಿಮಯ ಬಂಡವಾಳದಲ್ಲಿಯೂ ಆಗಸ್ಟ್ ನಲ್ಲಿ ಹೆಚ್ಚಳವಾಗಿತ್ತು ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.