Advertisement

ಗೋವಿಂದ ಕಾರಜೋಳಗೆ ವಿಧಾನಸಭೆ ಸೋಲಿನ ಕಹಿ ಮರೆಸಿದ ಗೆಲುವು

06:08 PM Jun 05, 2024 | Team Udayavani |

■ ಉದಯವಾಣಿ ಸಮಾಚಾರ
ಚಿತ್ರದುರ್ಗ: ವಿಧಾನಸಭೆ ಚುನಾವಣೆ ಸೋಲಿನ ಬೇಸರದಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಲೋಕಸಭೆ ಚುನಾವಣೆ ಗೆಲುವು ಹುಮ್ಮಸ್ಸು ಮೂಡಿಸಿದೆ. ಒಂದೆಡೆ ದೇಶದಲ್ಲಿ ಮತ್ತೆ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಬರುವುದು ಖಚಿತವಾಗುತ್ತಿದ್ದರೆ, ಮತ್ತೂಂದೆಡೆ ರಾಜ್ಯದಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಸಾ ಧಿಸುವ ಸುದ್ದಿ, ಇದರ ನಡುವೆ ಚಿತ್ರದುರ್ಗ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಲೀಡ್‌ ಪ್ರತಿ ಸುತ್ತಿಗೂ ಹೆಚ್ಚಾಗುತ್ತಿದ್ದಂತೆ ಜೈ ಶ್ರೀರಾಮ್‌, ಭಾರತ್‌ ಮಾತಾ ಕೀ ಜೈ, ಮೋದಿ ಮೋದಿ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು.

Advertisement

ಸರ್ಕಾರಿ ವಿಜ್ಞಾನ ಕಾಲೇಜು ಕಟ್ಟಡದಲ್ಲಿ ಮತ ಎಣಿಕೆ ನಡೆಯುತ್ತಿದ್ದರೆ, ಜಗದ್ಗುರು ಜಯದೇವ ಕ್ರೀಡಾಂಗಣ ಹಾಗೂ ಬಿ.ಡಿ.ರಸ್ತೆಯ ಪಂಚಾಚಾರ್ಯ ಕಲ್ಯಾಣ ಮಂಟಪದ ಬಳಿ ನೂರಾರು ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲಿನೊಂದಿಗೆ ಆಗಮಿಸಿ ಸಂಭ್ರಮಿಸುತ್ತಿದ್ದರು. ಮತ ಎಣಿಕೆ ಆರಂಭದಲ್ಲಿ ಕಾಂಗ್ರೆಸ್‌ ಪರ ವಾತಾವರಣ ಇದ್ದಾಗ ಕಾಂಗ್ರೆಸ್‌ ಕಾರ್ಯಕರ್ತರು ಉತ್ಸಾಹದಲ್ಲಿದ್ದರು.

ಆದರೆ ಬಿಜೆಪಿ ಪರ ವಾತಾವರಣ ಬದಲಾಗುತ್ತಲೇ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ಎಣಿಕೆ ಕೇಂದ್ರದಿಂದ ಹೊರ ನಡೆದರು. ಅವರ ಹಿಂದೆಯೇ ಕಾರ್ಯಕರ್ತರು ಕೂಡ ನಿರಾಸೆಯಿಂದ ಹೆಜ್ಜೆ ಹಾಕಿದರು.

ಇತ್ತ ಗೆಲುವಿನ ಖಾತರಿ ಸಿಗುತ್ತಿದ್ದಂತೆ ಕೇಸರಿ ಪಾಳೆಯದ ಕಾರ್ಯಕರ್ತರು ಜಮಾಯಿಸತೊಡಗಿದರು. ಗೋವಿಂದ ಕಾರಜೋಳ ಮತ ಎಣಿಕೆ ಕೇಂದ್ರಕ್ಕೆ ಬರುವಾಗ ನೂರಾರು ಮಂದಿ ಜೊತೆಗೆ ಬಂದು ವಿಜಯದ ಸಂಕೇತ ತೋರಿಸಿದರು. ಪ್ರಮಾಣಪತ್ರ ಪಡೆದು
ತೆರಳುವಾಗ ಹಾರ, ತುರಾಯಿ, ಘೋಷಣೆ ಜೊತೆಗೆ ಕಾರಜೋಳ ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಕಾರ್ಯಕರ್ತರು,
ಸಾರ್ವಜನಿಕರು ಮುಗಿ ಬಿದ್ದಿದ್ದರು. ಅಲ್ಲಿಂದ ಮುಖ್ಯ ರಸ್ತೆಗೆ ತೆರಳುವಾಗ ವಾಹನವೊಂದರಿಂದ ಮಿಂಚು ಹಾಗೂ ಕೇಸರಿ ಬಣ್ಣದ ಪೌಡರ್‌ ಸ್ಪ್ರೆ ಮಾಡುವ ಮೂಲಕ ಕೇಸರಿ ಬಣ್ಣದ ಮಳೆ ಸುರಿಸಿದರು. ಅಲ್ಲಿದ್ದ ಬಹುತೇಕರ ತಲೆ, ಮೈಕೈ, ಬಟ್ಟೆ, ವಾಹನಗಳೆಲ್ಲಾ ಕೇಸರಿ ಬಣ್ಣದಿಂದ ಮಿಂದು ಹೋಗಿದ್ದವು. ಹತ್ತಾರು ವಾಹನಗಳಲ್ಲಿ ಬಿಜೆಪಿ ಕಚೇರಿಗೆ ಬಂದ ಗೋವಿಂದ ಕಾರಜೋಳ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಜೊತೆಗೆ ಸಂಭ್ರಮಿಸಿದರು.

ನಂತರ ಶ್ರೀ ನೀಲಕಂಠೇಶ್ವರ ದೇವಸ್ಥಾನ, ಜೆಸಿಆರ್‌ ಬಡಾವಣೆಯ ಗಣಪತಿ ದೇವಸ್ಥಾನ, ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದರು. ತೀವ್ರ ಪೈಪೋಟಿ ಏರ್ಪಟ್ಟಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆದ್ದರೂ ಅಚ್ಚರಿ ಇಲ್ಲ ಎನ್ನುವ
ವಾತಾವರಣ ಸೃಷ್ಟಿಯಾಗಿತ್ತು. ಬಿಜೆಪಿ ಗೆಲುವಿನ ದಡ ಮುಟ್ಟುತ್ತಲೇ ಕಾರ್ಯಕರ್ತರು ಮೊಬೈಲ್‌ ವಾಟ್ಸ್‌ಆ್ಯಪ್‌, ಸ್ಟೇಟಸ್‌ ಹಾಕಿಕೊಂಡು ಸಂಭ್ರಮಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next