ಬೆಳಗಾವಿ: ಅನುದಾನ ಹಂಚಿಕೆಯ ವಿಷಯವಾಗಿ ಮುಖ್ಯಮಂತ್ರಿಗಳ ವಿರುದ್ಧ ಸಚಿವ ಈಶ್ವರಪ್ಪ ಬರೆದಿರುವ ಪತ್ರದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿಗಳಿಗೆ ಇರುವ ಪರಮಾಧಿಕಾರವನ್ನು ನಾವು ಯಾರೂ ಪ್ರಶ್ನೆ ಮಾಡುವುದು ಸರಿಯಲ್ಲ ಎಂದರು.
ಬೆಳಗಾವಿ ಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಚಿವ ಸಂಪುಟದ ಸದಸ್ಯರು, ಶಾಸಕರು, ಸಂಸದರು, ಚುನಾಯಿತ ಪ್ರತಿನಿಧಿಗಳು ಯಾರೂ ಕೂಡಾ ಮುಖ್ಯಮಂತ್ರಿ ಪರಮಾಧಿಕಾರವನ್ನು ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಈಶ್ವರಪ್ಪ ಅವರು ಯಾವ ವಿಚಾರ ಇಟ್ಟುಕೊಂಡು ಪತ್ರ ಬರೆದಿರುವುದು ಗೊತ್ತಿಲ್ಲ. ನಾನು ಅವರೊಂದಿಗೆ ಚರ್ಚೆ ಮಾಡಿಲ್ಲ, ಒಂದು ಸರ್ಕಾರ ವಾಗಿ ಒಗ್ಗಟ್ಟಿನಿಂದ, ಒಮ್ಮತದಿಂದ ಕೆಲಸ ಮಾಡಬೇಕು. ಮುಖ್ಯಮಂತ್ರಿ ನಿರ್ದೇಶನದಂತೆ ಕೆಲಸ ಮಾಡಬೇಕು ಎಂದು ಕಾರಜೋಳ ಹೇಳಿದರು.
ಇದನ್ನೂ ಓದಿ:ಮೋದಿ ‘ದಾರಿಹೋಕ’ರಂತೆ ವರ್ತಿಸಿದ್ದಾರೆ : ಪ್ರಧಾನಿ ವಿರುದ್ಧ ಮಾಹುವಾ ಆಕ್ರೋಶ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ನಿರ್ದೇಶನದಂತೆ,ಒಮ್ಮತದಿಂದ ಸಚಿವ ಸಂಪುಟ ಕೆಲಸ ಮಾಡುತ್ತಿದೆ. 33 ಇಲಾಖೆಗೂ ಮುಖ್ಯಮಂತ್ರಿಗಳು ಅನುದಾನ ಹಂಚಿಕೆ ಮಾಡಿದ್ದಾರೆ. 224 ಮತಕ್ಷೇತ್ರಕ್ಕೂ ಕೇಳಿದಷ್ಟು ಅನುದಾನ ಕೊಡಲು ಸಾಧ್ಯ ಆಗುವುದಿಲ್ಲ. ಹೀಗಾಗಿ ಶಾಸಕರು ,ಸಂಸದರು ನಮ್ಮ ಬಳಿಗೆ ಬಂದಾಗ ನಮಗೆ ಕೊಟ್ಟಿರುವ ಅನುದಾನ ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ಬೇಕಾದರೆ ಸಿಎಂ ಅವರನ್ನು ಕೇಳಿ ಎನ್ನುತ್ತೇವೆ. ಅದರಂತೆ ಸಿಎಂ ಅವರು ಶಾಸಕರ ಬೇಕು ಬೇಡಗಳನ್ನು ನೋಡಿ ಅನುದಾನ ಕೊಡುತ್ತಾರೆ ಎಂದು ಹೇಳಿದರು.
ಬೆಳಗಾವಿ ಲೋಕಸಭೆ ಚುನಾವಣೆ ಪ್ರಚಾರ ವ್ಯವಸ್ಥಿತವಾಗಿ ನಡೆಯುತ್ತಿದೆ.ನಮ್ಮ ಕಾರ್ಯಕರ್ತರು 8 ಮತಕ್ಷೇತ್ರದಲ್ಲಿ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಮತದಾರರಿಗೂ ಉತ್ಸಾಹ ಇದೆ. ಸುರೇಶ್ ಅಂಗಡಿ ಸಂಸದರಾಗಿ ಹಾಗೂ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಧರ್ಮಪತ್ನಿ ಮಂಗಲ ಅಂಗಡಿ ಅವರನ್ನು ಗೆಲ್ಲಿಸಬೇಕೆಂಬ ಭಾವನೆ ಮತದಾರರಲ್ಲಿ ಇದೆ ಎಂದರು.