ಹೊಸದಿಲ್ಲಿ : ಬಿಹಾರದ ರಾಜಧಾನಿ ಪಟ್ನಾದಲ್ಲಿ ದಿನವೊಂದರಲ್ಲಿ ಸಂಭವಿಸುವ ಸಂಖ್ಯೆಯ ಸಾವುಗಳು ಕಾಶ್ಮೀರದಲ್ಲಿ ಒಂದು ವಾರದಲ್ಲಿ ಸಂಭವಿಸುವ ಸಾವುಗಳ ಸಂಖ್ಯೆಗೆ ಸಮವಾಗಿರುತ್ತದೆ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಜಮ್ಮು ಕಾಶ್ಮೀರದಲ್ಲಿ ಸಂಭವಿಸುತ್ತಿರುವ ಸಾವುಗಳ ಪ್ರಮಾಣ ಈಗ ತುಂಬ ಕಡಿಮೆಯಾಗಿದ್ದು ಈ ವಿಷಯದಲ್ಲಿ ಭಾರತದ ಇತರ ರಾಜ್ಯಗಳಂತೆ ಜಮ್ಮು ಕಾಶ್ಮೀರ ಕೂಡ ಒಂದಾಗಿದೆ ಎಂದು ಮಲಿಕ್ ಹೇಳಿದರು.
ಜಮ್ಮು ಕಾಶ್ಮೀರದಲ್ಲೀಗ ಕಲ್ಲೆಸೆವ ಪ್ರಕರಣಗಳು ಕಡಿಮೆಯಾಗಿವೆ; ಹಾಗೆಯೇ ಉಗ್ರ ಸಮೂಹಗಳಿಗೆ ನಡೆಯುವ ನೇಮಕಾತಿಗಳು ಕೂಡ ಕಡಿಮೆಯಾಗಿವೆ ಎಂದು ಮಲಿಕ್ ಹೇಳಿದರು.
ಹಾಗಿದ್ದರೂ ರಾಜ್ಯಪಾಲ ಮಲಿಕ್ ಅವರು ಪಟ್ನಾವನ್ನು ಸಾವಿನ ಸಂಖ್ಯೆಗೆ ಉದಾಹರಣೆಯಾಗಿ ತೆಗೆದುಕೊಂಡದ್ದು ಬಿಹಾರದ ರಾಜಕಾರಣಿಗಳಿಗೆ ಇರಿಸುಮುರಿಸು ಉಂಟುಮಾಡಿದೆ. ಕಾರಣ ಬಿಹಾರದಲ್ಲೀಗ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿಯ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದೆ.
ಕಳೆದ ವರ್ಷ ನವೆಂಬರ್ ನಲ್ಲಿ ತಾನು ಜಮ್ಮು ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸಿದ್ದುದು ದಿಲ್ಲಿ (ಬಿಜೆಪಿ) ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು ಮತ್ತು ತನಗೆ ವರ್ಗಾವಣೆ ಭೀತಿ ಇತ್ತು ಎಂದು ಮಲಿಕ್ ಹೇಳಿದ್ದರು. ಹಾಗಿದ್ದರೂ ತನ್ನ ಮೇಲೆ ಕೇಂದ್ರ ಸರಕಾರದ ಯಾವುದೇ ಒತ್ತಡ ಇರಲಿಲ್ಲ ಎಂದೂ ಪುನರುಚ್ಚರಿಸಿದ್ದರು.
“ಜಮ್ಮು ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸುವ ಮುನ್ನ ಒಂದೊಮ್ಮೆ ನಾನು ದಿಲ್ಲಿಯತ್ತ ಮುಖ ಮಾಡಿದ್ದರೆ ಸಜ್ಜದ್ ಲೋನ್ ಅವರಿಗೆ ಸರಕಾರ ರಚಿಸುವಂತೆ ಆಹ್ವಾನಿಸಬೇಕಾಗುತ್ತಿತ್ತು. ಆದರೆ ನಾನೊಬ್ಬ ಅಪ್ರಾಮಾಣಿಕ ಮನುಷ್ಯನಾಗಿ ಇತಿಹಾಸ ಸೇರಲು ಬಯಸಿರಲಿಲ್ಲ. ಈಗ ನನ್ನ ಬಗ್ಗೆ ಯಾರು ಏನು ಹೇಳಿದರೂ ನಾನು ಕ್ಯಾರೇ ಮಾಡುವುದಿಲ್ಲ’ ಎಂದು ಮಲಿಕ್ ಹೇಳಿದ್ದರು.