Advertisement

ರೈತರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರಗಳು ವಿಫ‌ಲ

07:26 AM Feb 22, 2019 | Team Udayavani |

ಗೌರಿಬಿದನೂರು: ದೇಶದಲ್ಲಿ ಎಪ್ಪತ್ತು ವರ್ಷಗಳ ಕಾಲ ಆಡಳಿತ ನಡೆಸಿದ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತಪರ, ಜನಪರ ಎಂದು ಹೇಳಿಕೊಂಡರೂ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲಗೊಂಡಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆಕ್ರೋಶ ವ್ಯಕ್ತಪಡಿಸಿದರು. 

Advertisement

ನಗರದ ವಾಲ್ಮೀಕಿ ವೃತ್ತ ಸಮೀಪದ ಮಾರುತಿ ಸಮುದಾಯ ಭವನದಲ್ಲಿ ತಾಲೂಕು ರೈತ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ರಾಜಕೀಯ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ಮಾಲೀಕರ ಸಾಲ ಮನ್ನಾ ಮಾಡಲಾಗಿದೆ. ರೈತರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸಿ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡುವ ಯೋಜನೆ ಜಾರಿಗೆ ತಂದಿದೆ ಎಂದು ಆರೋಪಿಸಿದರು. 

ಸ್ವಾಮಿನಾಥನ್‌ ವರದಿ ಪ್ರಕಾರ ಒಂದು ಕ್ವಿಂಟಲ್‌ ರಾಗಿಗೆ 5820 ರೂ. ಬೆಂಬಲ ಬೆಲೆ ನೀಡುವಂತೆ ಶಿಫಾರಸು ಮಾಡಲಾಗಿದೆ. ಆದರೆ ಈಗ ಸರ್ಕಾರ ನೀಡುತ್ತಿರುವುದು 2897 ರೂ. ಇದರಿಂದ ಪ್ರತಿಯೊಂದು ಕ್ವಿಂಟಲ್‌ಗೆ 2923 ರೂ. ರೈತರಿಗೆ ನಷ್ಟವಾಗುತ್ತಿದೆ ಎಂದರು. 

ಜಾಗೃತರಾಗಬೇಕು: ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತೆಯರು ಮಾಡುತ್ತಿರುವ ಹೋರಾಟ ಮತ್ತು ಪ್ರತಿಭಟನೆಗಳಿಗೆ ಮನ್ನಣೆ ನೀಡಿ ಸರ್ಕಾರಗಳು ವೇತನ ಹೆಚ್ಚು ಮಾಡುತ್ತವೆ. ಆದರೆ ರೈತರ ಹೋರಾಟಗಳಿಗೆ ಮನ್ನಣೆಯಿಲ್ಲದಂತಾಗಿದೆ. ಪ್ರತಿಯೊಬ್ಬ ರೈತ ಸಂಘಟನೆಗೊಳ್ಳುವ ಮೂಲಕ ಭ್ರಷ್ಟ ರಾಜಕಾರಣಿಗಳ ಆಯ್ಕೆ ಬದಲಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗಳಿಗೆ ಮತ ನೀಡುವ ಮೂಲಕ ರಾಜಕೀಯ ಜಾಗೃತರಾಗಬೇಕು ಎಂದರು.

ಸಮಸ್ಯೆ ಬಗೆಹರಿಸುವಲ್ಲಿ ವಿಫ‌ಲ: ಚಿಕ್ಕಬಳ್ಳಾಪುರದಲ್ಲಿ ಮಾರ್ಚ್‌ 6ರಂದು ರೈತ ಸಂಘಟನೆಯಿಂದ ರೈತರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಸಲುವಾಗಿ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿರುವ ಸಂಸದ ವೀರಪ್ಪ ಮೊಯ್ಲಿ ಮತ್ತೆ ಚುನಾವಣೆ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಿರುವ ಬಚ್ಚೇಗೌಡರಿಗೆ ಮತ್ತೆ ಮತ ಹಾಕಬೇಕೆ‌? ಇವರ ಆಶ್ವಾಸನೆಗಳನ್ನು ಇನ್ನೂ ನಂಬಬೇಕೆ? ಇದಕ್ಕೆ ಪರ್ಯಾಯ ಮಾರ್ಗವಿಲ್ಲವೇ ಎಂದು ಪ್ರಶ್ನಿಸಿದರು. 

Advertisement

ತಾಲೂಕು ಘಟಕದ ಅಧ್ಯಕ್ಷ ಕೋಲಾಟ್ಲ ನರಸಿಂಹರೆಡ್ಡಿ ಮಾತನಾಡಿ, ರೈತರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಮಾರ್ಚ್‌ 6ರಂದು ರೈತರ ರಾಜಕೀಯ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ರೈತ ಸಂಘದಿಂದ ಕೋಡಿಹಳ್ಳಿ ಚಂದ್ರಶೇಖರ್‌ ಸ್ಪರ್ಧಿಸುವುದು ಬಹುತೇಕ ಖಚಿತ ಎಂದರು.

ರೈತ ಸಂಘದ ಮುಖಂಡರಾದ ಭಕ್ತರಹಳ್ಳಿ ಭೈರೇಗೌಡ, ದೊಡ್ಡಬಳ್ಳಾಪುರ ರೈತ ಸಂಘದ ಅಧ್ಯಕ್ಷ ಪ್ರಕಾಶ್‌, ಪದಾಧಿಕಾರಿಗಳಾದ ಮಲ್ಲಣ್ಣ, ಸೈಯದ್‌ ಮುಕ್ತಾರ್‌ ಅಹಮದ್‌, ಮಂಜುನಾಥ್‌, ನರಸಿಂಹಮೂರ್ತಿ, ಅಂಜನರೆಡ್ಡಿ, ವಿ.ವೀರಭದ್ರಸ್ವಾಮಿ, ಸತೀಶ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next