ನವದೆಹಲಿ: ಭಾರತದಲ್ಲಿ ಇಮೇಲ್ ಮೂಲಕ ಹೊಸ ರೀತಿಯ ರ‍್ಯಾನ್ಸಮ್‌ವೇರ್ ಹಬ್ಬಲು ಆರಂಭವಾಗಿದ್ದು, ಕೇಂದ್ರ ಸರ್ಕಾರವು “ವೈರಲ್ ಅಲರ್ಟ್’ ಘೋಷಿಸಿದೆ.
ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ(ಸಿಇಆರ್‌ಟಿ-ಇನ್)ದ ಮೂಲಕ “ಡಯಾವೋಲ್’ ಎಂಬ ಹೆಸರಿನ ರ‍್ಯಾನ್ಸಮ್‌ವೇರ್ ಬಗ್ಗೆ ಈ ಅಲರ್ಟ್ ಕಳುಹಿಸಲಾಗಿದೆ.
ಈ ರ‍್ಯಾನ್ಸಮ್‌ವೇರ್ ವಿಂಡೋಸ್ ಕಂಪ್ಯೂಟರ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದು, ಪೇಲೋಡ್ ಆ ಕಂಪ್ಯೂಟರ್ ಅನ್ನು ತಲುಪಿದ ಕೂಡಲೇ ಎಲ್ಲೋ ದೂರವಿದ್ದುಕೊಂಡು ನಿಮ್ಮ ಪಿಸಿಯನ್ನು ಲಾಕ್ ಮಾಡಲಾಗುತ್ತದೆ. ನಂತರ, ಅದನ್ನು ಅನ್‌ಲಾಕ್ ಮಾಡಬೇಕೆಂದರೆ ಇಂತಿಷ್ಟು ಹಣವನ್ನು ನೀಡಬೇಕೆಂದು ಬೇಡಿಕೆಯಿಡಲಾಗುತ್ತದೆ ಎಂದು ಸಿಇಆರ್‌ಟಿ ಹೇಳಿದೆ.
ಇದನ್ನೂ ಓದಿ:ಪರಿಷತ್ ನಲ್ಲಿ ಬಹುಮತವಿಲ್ಲ,ಮುಂದೆ ನೋಡೋಣ: ಸಿಎಂ ಬೊಮ್ಮಾಯಿ
ಬಳಕೆದಾರರಿಂದ ಬಿಟ್‌ಕಾಯಿನ್‌ಗಳ ಮೂಲಕ ಹಣವನ್ನು ವಸೂಲಿ ಮಾಡಲು ಈ ಬ್ಲ್ಯಾಕ್‌ಮೇಲ್ ತಂತ್ರವನ್ನು ಬಳಸಲಾಗುತ್ತದೆ. ಬಳಕೆದಾರರೇನಾದರೂ ಹಣ ನೀಡಲು ಒಪ್ಪದೇ ಇದ್ದರೆ, ಆ ಪಿಸಿಯಲ್ಲಿನ ಪ್ರಮುಖ ಕಡತಗಳನ್ನೆಲ್ಲ ಡಿಲೀಟ್ ಮಾಡುವುದಾಗಿ ಬೆದರಿಕೆಯೊಡ್ಡಲಾಗುತ್ತದೆ. ಕೊನೆಗೆ ನಿಮಗೆ ಪಿಸಿಯೂ ಉಪಯೋಗಕ್ಕೆ ಬಾರದಂತೆ ಮಾಡಲಾಗುತ್ತದೆ.
ಇಂಥ ಸಮಸ್ಯೆಗೆ ಸಿಗಬಾರದು ಎಂದರೆ, ನೀವು ಆದಷ್ಟು ಬೇಗ ಸಾಫ್ಟ್ ವೇರ್ ಮತ್ತು ಆಪರೇಟಿಂಗ್ ಸಿಸ್ಟಂಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ನಿಮಗೆ ಬರುವ ಮತ್ತು ನೀವು ಕಳುಹಿಸುವ ಎಲ್ಲ ಇಮೇಲ್‌ಗಳನ್ನು ಸ್ಕ್ಯಾನ್ ಮಾಡಿ, ಅಪಾಯವನ್ನು ಪತ್ತೆಹಚ್ಚಿ. ಅನುಮಾನಾಸ್ಪದ ಲಿಂಕ್‌ಗಳನ್ನು ಓಪನ್ ಮಾಡದಿರಿ ಎಂದು ಸಲಹೆ ನೀಡಲಾಗಿದೆ.