ತಿರುವನಂತಪುರ: ಮಹಾ ಮಳೆಗೆ ಸಿಲುಕಿದ ರಾಜ್ಯದಲ್ಲಿನ ಅನೇಕ ಅಣೆಕಟ್ಟುಗಳ ಗೇಟುಗಳನ್ನು ಸೂಕ್ತ ಮುನ್ನೆಚ್ಚರಿಕೆ ನೀಡದೆ ತೆರೆಯಲಾಗಿತ್ತು. ಇದರಿಂದಾಗಿ ಹೆಚ್ಚಿನ ಜಿಲ್ಲೆಗಳು ಪ್ರವಾಹಗ್ರಸ್ತವಾದವು ಮತ್ತು 231 ಮಂದಿ ಬಲಿಯಾಗಿ ಅಗಾಧ ವಿನಾಶವುಂಟಾಯಿತು ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರು ಆಪಾದಿಸಿದ್ದಾರೆ. ಈ ಕುರಿತು ನ್ಯಾಯಾಂಗ ತನಿಖೆಯೊಂದಕ್ಕೆ ಆದೇಶಿಸಬೇಕೆಂದು ಕೂಡ ಅವರು ಆಗ್ರಹಿಸಿದ್ದಾರೆ. ಅನೇಕ ಜೀವಗಳು ಬಲಿಯಾಗಲು ಕಾರಣವಾದ ಪ್ರವಾಹ ‘ಮಾನವನಿರ್ಮಿತ ವಿಪತ್ತು’ ಆಗಿತ್ತು ಎಂದ ಅವರು, ಎಲ್ಲ ಅಣೆಕಟ್ಟುಗಳ ಗೇಟುಗಳನ್ನು ಯಾವುದೇ ಪೂರ್ವಸೂಚನೆ ನೀಡದೆ ತೆರೆಯಲಾಯಿತು ಮತ್ತು ಇದು ಅಗಾಧ ವಿನಾಶಕ್ಕೆ ಕಾರಣವಾಯಿತು. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿರಲಿಲ್ಲ ಎಂದರು.
ಇಸಾಕ್ ವಿರುದ್ಧ ಟೀಕಾಪ್ರಹಾರ
ರಾಜ್ಯ ವಿದ್ಯುತ್ ಸಚಿವ ಎಂ.ಎಂ. ಮಣಿ ಮತ್ತು ಜಲಸಂಪನ್ಮೂಲ ಸಚಿವ ಟಿಎಂ ಥೋಮಸ್ ಇಸಾಕ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಚೆರುತ್ತೋಣಿ ಅಣೆಕಟ್ಟಿನ ಗೇಟುಗಳನ್ನು ಹಾಗೂ ಇಡುಕ್ಕಿ ಜಲಾಶಯದ ಭಾಗವೊಂದನ್ನು ತೆರೆಯುವಾಗ ಎರಡು ಖಾತೆಗಳ ನಡುವೆ ಹೊಂದಾಣಿಕೆ ಇರಲಿಲ್ಲ ಎಂದರು.
ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದರೂ ಹೆಚ್ಚಿಗೆ ವಿದ್ಯುತ್ ಉತ್ಪಾದಿಸುವ ಮೂಲಕ ಗರಿಷ್ಠ ಲಾಭವನ್ನು ಗಳಿಸುವುದಕ್ಕೆ ಯತ್ನಿಸಿದ ರಾಜ್ಯ ವಿದ್ಯುಚ್ಛಕ್ತಿ ಮಂಡಲಿಯ (ಕೆಎಸ್‌ಇಬಿ) ಅಧಿಕಾರಿಗಳ ವಿರುದ್ಧವೂ ಅವರು ಟೀಕಾದಾಳಿ ನಡೆಸಿದರು. ಅನೇಕ ಗರಿಷ್ಠ ಪೀಡಿತ ಜಿಲ್ಲೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ಮನೆಗಳನ್ನು ಪ್ರವೇಶಿಸಿದ ವೇಳೆ ಜನರು ಮಲಗಿ ನಿದ್ರಿಸಿದ್ದರು ಎಂದ ಅವರು, ಸರಕಾರ ಎಚ್ಚರಿಕೆಗಳನ್ನು ಕಡೆಗಣಿಸಿತು ಎಂದು ಆರೋಪಿಸಿದರು.
ಯಾವುದೇ ಎಚ್ಚರಿಕೆ ನೀಡುವುದಕ್ಕೆ ಮುನ್ನವೇ ಪತ್ತನಂತಿಟ್ಟದ ರಾನ್ನಿ ಪ್ರದೇಶ ಜಲಾವೃತವಾಗಲಾರಂಭಿಸಿತ್ತು. ಕಾಕ್ಕಿ ಮತ್ತು ಪಂಪಾ ಅಣೆಕಟ್ಟುಗಳ ಗೇಟುಗಳನ್ನು ತೆರೆಯುವ ವೇಳೆ ಲೋಪಗಳು ಸಂಭವಿಸಿದ್ದವು ಎಂದು ಸಿಪಿಐ(ಎಂ) ಶಾಸಕ ರಾಜು ಅಬ್ರಹಾಂ ಹೇಳಿದರು. ವಯನಾಡ್‌ನ ಬಾಣಾಸುರ ಅಣೆಕಟ್ಟಿನ ಮೂರು ಗೇಟುಗಳನ್ನು ಜಿಲ್ಲಾಧಿಕಾರಿಯವರಿಗೆ ಕೂಡ ತಿಳಿಸದೆ ತೆರೆಯಲಾಗಿತ್ತೆಂಬ ಆರೋಪಗಳು ಕೇಳಿಬಂದಿದ್ದವು.