ಹೊಸದಿಲ್ಲಿ: ಇನ್ನು ಮುಂದೆ ರೈಲು ಹತ್ತಿದ ಕೂಡಲೇ ನಿಮಗೆ ನಿದ್ರಾದೇವಿ ಆವರಿಸಿಕೊಂಡರೆ ಆಕೆಯನ್ನು ಬಲ ವಂತವಾಗಿಯಾದರೂ ದೂರ ತಳ್ಳಲೇಬೇಕು!
ಏಕೆಂದರೆ ರೈಲ್ವೇ ಇಲಾಖೆ ಪ್ರಯಾಣಿಕರ “ನಿದ್ರಾ ಸಮಯ’ ವನ್ನು ಕಡಿತ ಮಾಡಿದೆ. ನಾವು ಸ್ಲಿàಪರ್ ಸೀಟ್ ಬುಕ್ ಮಾಡಿ ಕೊಂಡಿದ್ದೇವೆ. ರೈಲು ಹತ್ತಿದ ತತ್‌ಕ್ಷಣ ಮಲಗಬಹುದು ಎಂದುಕೊಂಡು ಹೋದರೂ ನಿದ್ದೆ ಮಾಡೋದು ಕಷ್ಟವೇ ಸರಿ.
ರೈಲ್ವೇ ಇಲಾಖೆ ಹೊಸ ನಿಯಮವನ್ನು ಮಾಡಿದ್ದು, ಈ ಪ್ರಕಾರ ಇನ್ನು ಮುಂದೆ ಪ್ರಯಾ ಣಿಕರು ರಾತ್ರಿ 10 ಗಂಟೆಗೆ ಮಲಗಿ ಬೆಳಗ್ಗೆ 6 ಗಂಟೆಗೆ ಎದ್ದುಬಿಡಬೇಕು. ಏಳಲಿಲ್ಲವೆಂದರೆ ಬಲವಂತ ವಾಗಿಯಾದರೂ ಯಾರಾದರೂ ಎಬ್ಬಿಸಿಯೇ ಬಿಡುತ್ತಾರೆ. ಇದಕ್ಕೆ ಕಾರಣ “ಅಕಾರಣ ಜಗಳ’.
ರೈಲಿನಲ್ಲಿ ಮೂರು ಬರ್ತ್‌ಗಳಿದ್ದು, ಇವುಗಳನ್ನು “ಲೋವರ್ ಬರ್ತ್’, “ಮಿಡಲ್ ಬರ್ತ್’ ಮತ್ತು “ಅಪ್ಪರ್ ಬರ್ತ್’ ಗಳೆಂದು ವಿಂಗಡಿಸಲಾಗಿದೆ. ಜನರು ರೈಲು ಹತ್ತಿದ ಕೂಡಲೇ ತನ್ನ ಸೀಟ್ ನಂಬರ್ ಇರುವ ಜಾಗದಲ್ಲಿನ ಲೋವರ್ ಬರ್ತ್‌ನಲ್ಲಿಯೇ ಕುಳಿತುಕೊಳ್ಳುತ್ತಾರೆ. ಆದರೆ ರಾತ್ರಿ ಒಂಬತ್ತು ಗಂಟೆಯಾಗುತ್ತಿದ್ದಂತೆ, ಅಕ್ಕಪಕ್ಕ ಕುಳಿತಿದ್ದವರು ಎದ್ದೇಳಿ ನಾವು ಮಲಗಬೇಕು ಎಂದು ಬೇಡಿಕೆ ಶುರು ಮಾಡಿಕೊಳ್ಳುತ್ತಾರೆ. ಒಂದು ವೇಳೆ ಅವರಿಗೆ ಮಲಗಲು ಅವಕಾಶ ಮಾಡಿಕೊಡದಿದ್ದರೆ ಜಗಳ ಆರಂಭ. ಅದರಲ್ಲೂ ಕೆಳ ಬರ್ತ್‌ನವನು ಮಲಗಲೇಬೇಕು, ಜಾಗ ಬಿಡಿ ಎಂದರೆ ಮೇಲಿನವರ ಸ್ಥಿತಿ ಹರೋಹರ.
ಇನ್ನು ಬೆಳಗ್ಗೆಯೂ ಅಷ್ಟೇ. ಕೆಲವರು ಬೆಳಗ್ಗೆ ಆರು ಗಂಟೆಯಾಗುತ್ತಿದ್ದಂತೆ ಎದ್ದೇಳುವ ಅಭ್ಯಾಸ ಇರಿಸಿಕೊಂಡಿರುತ್ತಾರೆ. ಇಲ್ಲೂ ಲೋವರ್ ಬರ್ತ್‌ನವನೇ ಬೇಗ ಎಚ್ಚರಗೊಂಡರೆ ಆತ ಮಧ್ಯ ಬರ್ತ್‌ನವನು ಎದ್ದೇಳುವವರೆಗೆ ಅನಿ ವಾರ್ಯವಾಗಿ ಮಲಗಿರಲೇಬೇಕಾಗುತ್ತದೆ. ಇಲ್ಲದಿದ್ದರೆ ಅತ್ತಕಡೆಯಿಂದ ಇತ್ತ ಕಡೆಗೆ ಓಡಾಡುತ್ತಿರಬೇಕಾಗುತ್ತದೆ. ಇದೇ ಸ್ಥಿತಿ ಮಧ್ಯ ಬರ್ತ್‌ನವನಿಗೂ ಆಗುತ್ತದೆ. ಈತನೂ ಬೇಗ ಎದ್ದರೆ ಒಂದೋ ಬಗ್ಗಿಯೇ ಕುಳಿತುಕೊಳ್ಳಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಮಲಗಬೇಕು.
ಒಂದು ಗಂಟೆ ಕತ್ತರಿ: ಮಲಗುವ ಮತ್ತು ಎದ್ದೇಳುವ ಸಮಯದ ವಿಚಾರವಾಗಿಯೇ ರೈಲಿನಲ್ಲಿ ಭಾರಿ ಹೊಡೆದಾಟಗಳು, ಜಗಳ ನಡೆಯುತ್ತಲೇ ಇರುತ್ತವೆ. ಇದನ್ನು ಮನಗಂಡ ರೈಲ್ವೇ ಇಲಾಖೆ ಮಲಗುವ ವೇಳೆಗೆ ಒಂದು ಗಂಟೆ ಕತ್ತರಿ ಹಾಕಿದೆ. ಇದುವರೆಗೆ ರಾತ್ರಿ 9ಕ್ಕೆ ಮಲಗಿ, ಬೆಳಗ್ಗೆ 6ಕ್ಕೆ ಏಳಬೇಕಾಗಿತ್ತು. ಇನ್ನು ಮುಂದೆ 10ಕ್ಕೆ ಮಲಗಿ ಬೆಳಗ್ಗೆ 6ಕ್ಕೆ ಏಳಬೇಕು ಎಂದು ನಿಯಮ ಮಾಡಲಾಗಿದೆ.