Advertisement

ಗ್ರಾ.ಪಂ.ಗಿದ್ದ ಏಕವಿನ್ಯಾಸ ಅನುಮೋದನೆ ಅಧಿಕಾರ ಮೊಟಕು; ಆದೇಶ ಹಿಂಪಡೆಯಲು ಮುಂದಾದ ಸರಕಾರ

01:44 AM Mar 26, 2022 | Team Udayavani |

ಕಡಬ: ಸ್ಥಳೀಯ ಯೋಜನಾ ಪ್ರದೇಶದ ಹೊರಗಡೆ ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಾಗಿ ವಿನ್ಯಾಸ ಅನುಮೋದನೆ ನೀಡಲು ಗ್ರಾ.ಪಂ. ಮತ್ತು ತಾ.ಪಂ.ಗಳಿಗಿದ್ದ ಅಧಿಕಾರವನ್ನು ಮೊಟಕುಗೊಳಿಸಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಅನುಮತಿ ಪಡೆಯುವಂತೆ ನೀಡಿದ್ದ ಆದೇಶವನ್ನು ಕರಾವಳಿಯ ಸಚಿವರು ಮತ್ತು ಶಾಸಕರ ಒತ್ತಾಯಕ್ಕೆ ಮಣಿದು ರದ್ದುಪಡಿಸಲು ಸರಕಾರ ಮುಂದಾಗಿದೆ.

Advertisement

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಇ-ಸ್ವತ್ತು ಅನುಷ್ಠಾನಕ್ಕೆ ಸಂಬಂಧಿಸಿ ನಡೆದ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ. ಸ್ಥಳೀಯ ಯೋಜನಾ ಪ್ರದೇಶದ ಹೊರಗಿನ ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಾಗಿ ವಿನ್ಯಾಸ ಅನುಮೋದನೆಯನ್ನು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಪಡೆಯಬೇಕು ಎಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲು ಕಾನೂನು, ನಗರಾಭಿವೃದ್ಧಿ, ಕಾರ್ಮಿಕ ಇಲಾಖೆ, ಪೌರಾಡಳಿತ ಖಾತೆಗಳ ಸಚಿವರು ಹಾಗೂ ಸರಕಾರದ ಕಾರ್ಯದರ್ಶಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹಿಂದೆ ಗ್ರಾ.ಪಂ. ಮತ್ತು ತಾ.ಪಂ.ಗಳಿಗಿದ್ದ ಏಕವಿನ್ಯಾಸ ಅನುಮೋದನಾ ಅಧಿಕಾರವನ್ನು ಮುಂದುವರಿಸುವಂತೆ ಸೂಚಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ದೂರದ ನಗರಕ್ಕೆ ಅಲೆದಾಡುವ ಕಷ್ಟ ದೂರವಾದಂತಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ 2015ರ ಮಾ. 19ರ ಸರಕಾರದ ಆದೇಶದಂತೆ ಸ್ಥಳೀಯ ಯೋಜನಾ ಪ್ರದೇಶದ ಹೊರಗಡೆ 0-0.25 ಎಕರೆ ವರೆಗೆ ಗ್ರಾ.ಪಂ., 1 ಎಕರೆ ವರೆಗೆ ತಾ.ಪಂ., 1 ಎಕರೆಗಿಂತ ಅ ಧಿಕ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಾಗಿ ಏಕವಿನ್ಯಾಸ ಖಾತೆ ಅನುಮೋದನೆ ನೀಡುವ ಅಧಿಕಾರವನ್ನು ಈ ಹಿಂದೆ ನೀಡಲಾಗಿತ್ತು. ಅದರಿಂದಾಗಿ ಆ ಭಾಗದ ಜನರಿಗೆ 9/11 ಖಾತೆ ಸುಲಭವಾಗಿ ಪಡೆಯಬಹುದಿತ್ತು.

ಇದನ್ನೂ ಓದಿ:ಯಾವ ಸ್ವಾಮೀಜಿಗಳ ಬಗ್ಗೆಯೂ ನಾನು ಅಗೌರವದಿಂದ ಮಾತನಾಡಿಲ್ಲ : ಸಿದ್ದು

ರಾಜ್ಯ ಸರಕಾರವು 2021ರ ಅ. 7ರಂದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆಗೆ ತಿದ್ದುಪಡಿಗೊಳಿಸಿ ಆದೇಶಿಸಿತ್ತು. ಅದರ ಪ್ರಕಾರ, ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಯಾವುದೇ ಭೂಮಿಯ ಮೇಲೆ ಅಭಿವೃದ್ಧಿಯನ್ನು ಕೈಗೊಳ್ಳಲು ಉದ್ದೇಶಿಸಿರುವ ವ್ಯಕ್ತಿಯು ಅನುಮತಿಗಾಗಿ ಸ್ಥಳೀಯ ಪ್ರಾಧಿಕಾರಕ್ಕೆ ಲಿಖಿತ ಅರ್ಜಿಯನ್ನು ಸಲ್ಲಿಸಬೇಕು. ಸ್ಥಳೀಯ ಪ್ರಾಧಿಕಾರವು ಅನುಮತಿ ನೀಡುವ ಮೊದಲು ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಅಥವಾ ಅವರಿಂದ ಅಧಿಕೃತಗೊಂಡು ನಗರ ಯೋಜನೆ ಸಹಾಯಕ ನಿರ್ದೇಶಕರ ದರ್ಜೆಗೆ ಕಡಿಮೆಯಿಲ್ಲದ ಯಾವುದೇ ಅಧೀನ ಅಧಿಕಾರಿಯ ಪೂರ್ವಾನುಮೋದನೆ ಪಡೆಯುವುದು ಅಗತ್ಯ ಎಂಬುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ 2022ರ ಫೆ. 28ರಿಂದ ಗ್ರಾ.ಪಂ. ಹಾಗೂ ತಾ.ಪಂ.ಗಳಿಗೆ ಏಕವಿನ್ಯಾಸ ಅನುಮೋದನೆ ನೀಡುವ ಅಧಿಕಾರವನ್ನು ಕಡಿತಗೊಳಿಸಿ ಗೊಂದಲ ಸೃಷ್ಟಿಯಾಗಿತ್ತು.

Advertisement

ಇದರಿಂದ ಕರಾವಳಿಯ ಗ್ರಾಮೀಣ ಭಾಗದ ಜನ ಸಹಜವಾಗಿಯೇ ಸರಕಾರದ ವಿರುದ್ಧ ಕೆರಳಿದ್ದರು. ಅದು ಕರಾವಳಿ ಭಾಗದ ಸಚಿವರು ಮತ್ತು ಶಾಸಕರಿಗೂ ನುಂಗಲಾರದ ತುತ್ತಾಗಿತ್ತು. ಸಚಿವರಾದ ಎಸ್‌. ಅಂಗಾರ, ಸುನಿಲ್‌ ಕುಮಾರ್‌ ಸೇರಿದಂತೆ ಜಿಲ್ಲೆಯ ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರು ಸರಕಾರದ ಮುಂದೆ ಅಸಮಾಧಾನ ವ್ಯಕ್ತಪಡಿಸಿ ಆದೇಶವನ್ನು ರದ್ದುಪಡಿಸುವಂತೆ ಒತ್ತಡ ಹಾಕಿದ್ದರು.

ವರದಿ ಪ್ರಕಟಿಸಿದ್ದ ಉದಯವಾಣಿ
ಸ್ಥಳೀಯ ಯೋಜನಾ ಪ್ರದೇಶದ ಹೊರಗೆ ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಾಗಿ ವಿನ್ಯಾಸ ಅನುಮೋದನೆ ನೀಡುವ ಗ್ರಾ.ಪಂ. ಮತ್ತು ತಾ.ಪಂ.ಗಳ ಅಧಿಕಾರವನ್ನು ಮೊಟಕುಗೊಳಿಸಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದಲೇ ಅನುಮತಿ ಪಡೆಯುವಂತೆ ಸರಕಾರ ಆದೇಶ ನೀಡಿದ ಬಗ್ಗೆ ಮಾ. 17ರಂದು ಉದಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next