ಬಸವಕಲ್ಯಾಣ: ರಾಜ್ಯದ ಜನರನ್ನು ಸುರಕ್ಷಿತವಾಗಿಡದ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾತಿ-ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಲಸವನ್ನು ಮಾತ್ರ ನಿರಂತರವಾಗಿ ಮಾಡುತ್ತಿದೆ ಎಂದು ಮಾಜಿ ಸಚಿವ, ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಆರೋಪಿಸಿದರು.
ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ರವಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಮಾಜಿ ಶಾಸಕ ಮಾರುತಿರಾವ್ ಮುಳೆ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಶೈವ ಮತ್ತು ಲಿಂಗಾಯತ ಸಮುದಾದಲ್ಲಿ ಸೃಷ್ಟಿಸಿದ ಕಂದಕ, ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಲ್ಲಿ ಸೃಷ್ಟಿಸಿದ ಗೊಂದಲ ಇದಕ್ಕೆ ಉತ್ತಮ ನಿದರ್ಶನ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ. ಮಹಿಳೆಯರು, ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ. ವಿಚಾರವಾದಿಗಳಾದ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ ಅವರ ಹತ್ಯೆ ನಡೆದು ಹಲವು ತಿಂಗಳುಗಳೇ ಗತಿಸಿದರೂ ಆರೋಪಿಗಳ ಸುಳಿವಿಲ್ಲ. ಸರ್ಕಾರದ ವರ್ತನೆಯಿಂದ ಜನತೆ ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಬಸವಕಲ್ಯಾಣದ ಅಭಿವೃದ್ಧಿಗಾಗಿ ರಚನೆಯಾಗಿರುವ ಅಭಿವೃದ್ಧಿ ಮಂಡಳಿಗೆ ಈ ಸರ್ಕಾರದ ಅವಧಿಯಲ್ಲಿ ಅಗತ್ಯ ಅನುದಾನ ಕಲ್ಪಿಸಿಲ್ಲ. ಹೀಗಾಗಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದು ಟೀಕಿಸಿದರು. ಮರಾಠಾ ಸಮುದಾಯದ ಮಾಜಿ ಶಾಸಕ ಎಂ.ಜಿ. ಮುಳೆ ಬಿಜೆಪಿಗೆ ಸೇರಿದ್ದು ಸಂತಸ ತಂದಿದೆ. ಮುಳೆ ಅವರು ಪಕ್ಷಕ್ಕೆ ಬಂದಿದ್ದರಿಂದ ಪಕ್ಷಕ್ಕೆ ಹೆಚ್ಚು ಬಲ ಬಂದಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಭಗವಂತ್ ಖೂಬಾ, ಶಾಸಕರಾದ ಪ್ರಭು ಚವ್ಹಾಣ್, ರಘುನಾಥ ಮಲ್ಕಾಪುರೆ, ಲಕ್ಷ್ಮಣ ಸವದಿ, ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್, ಬಾಬುರಾವ್ ಚೌಹಾಣ್, ಮಾಜಿ ಶಾಸಕ ಸುಭಾಷ್ ಕಲ್ಲೂರ್, ಪ್ರಕಾಶ ಖಂಡ್ರೆ, ಸುಭಾಷ ಗುತ್ತೇದಾರ, ರಾಜೇಂದ್ರ ವರ್ಮಾ, ಪಕ್ಷದ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಸಂಜಯ ಪಟವಾರಿ, ಸಂಜಯ ಖೇಣಿ, ಸೂರ್ಯಕಾಂತ ನಾಗಮಾರಪಳ್ಳಿ, ಡಿ.ಕೆ.ಸಿದ್ರಾಮ್, ಶಿವರಾಜ ಗಂದಗೆ, ಸುದಿಧೀರ ಕಾಡಾದಿ, ಪದ್ಮಾಕರ್ ಪಾಟೀಲ, ಸುನೀಲ ಪಾಟೀಲ, ಬಸವರಾಜ ಆರ್ಯ, ಈಶ್ವರಸಿಂಗ್ ಠಾಕೂರ, ಸೂರ್ಯಕಾಂತ ಚಿಲ್ಲಾಬಟ್ಟೆ, ದೀಪಕ್ ಗಾಯಕವಾಡ, ಶಂಕರ ನಾಗದೆ ಉಪಸ್ಥಿತರಿದ್ದರು. ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಯಕುಮಾರ ಕಾಂಗೆ ನಿರೂಪಿಸಿದರು. ಕೃಷ್ಣಾ ಗೌಣಿ ವಂದಿಸಿದರು. ಕಾಂಗ್ರೆಸ್ ತೊರೆದು ಸಾವಿರಾರು ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಶಾಸಕ ಎಂ.ಜಿ.ಮುಳೆ ಅವರಿಗೆ ಪಕ್ಷದ ಬಾವುಟ ನೀಡಿ ಸ್ವಾಗತಿಸಲಾಯಿತು.