Advertisement
ಗಾಂಧೀಜಿಯವರು 1920, 1927, 1934ರಲ್ಲಿ ಕರ್ನಾಟಕ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಿದ್ದರು. 1920ರ ಆಗಸ್ಟ್ 19ರಂದು ಮೊದಲ ಬಾರಿ ಬಂದಾಗ ಅಸಹಕಾರ ಚಳವಳಿಯ ಹಿನ್ನೆಲೆ ಇತ್ತು. ಆಗ ಅವರು ಮಾತನಾಡಿದ್ದು ಮಂಗಳೂರಿನ ಈಗಿನ ನೆಹರೂ ಮೈದಾನದಲ್ಲಿ. ಆಗ ಉಡುಪಿಗೆ ಬರುವ ಕಾರ್ಯಕ್ರಮ ಇತ್ತಾದರೂ ವೈಸರಾಯ್‌ಯಿಂದ ಕರೆ ಬಂದ ಕಾರಣ ವಾಪಸು ಹಿಂದಿರುಗಬೇಕಾಯಿತು. 1927ರಲ್ಲಿ ಬಂದಾಗ ಖಾದಿ ಪ್ರಚಾರ ಮುಖ್ಯ ಉದ್ದೇಶವಾಗಿತ್ತು. 1934ರಲ್ಲಿ ಬಂದಾಗ ದಲಿತೋದ್ಧಾರಕ್ಕಾಗಿ ಹಣ ಸಂಗ್ರಹ ನಡೆದಿತ್ತು. 1920ರಲ್ಲಿ ಮಂಗಳೂರಿಗೆ ಮತ್ತು 1934ರಲ್ಲಿ ಉಡುಪಿಗೆ ಬಂದಾಗ ಎರಡೂ ಸಂದರ್ಭ ಗಳಲ್ಲಿ ಗಾಂಧೀಜಿ ಅವರನ್ನು ಸ್ವಾಗತಿಸಿದವರು ಮತ್ತು ಸಾರ್ವಜನಿಕ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ದವರು ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬ್.
Related Articles
Advertisement
1882ರಲ್ಲಿ ಜನಿಸಿದ ಹಾಜಿ ಅಬ್ದುಲ್ಲಾ ಅವರು 53 ವರ್ಷ ಬದುಕಿ 1935ರಲ್ಲಿ ನಿಧನ ಹೊಂದಿದರು. ಈ ಕಿರು ಅವಧಿಯಲ್ಲಿ ಅವರ ಸಾಧನೆ ಅಪಾರ. 1906ರಲ್ಲಿ ಕಾರ್ಪೊರೇಶನ್ ಬ್ಯಾಂಕ್ ಸ್ಥಾಪಿಸಿ 1929ರ ವರೆಗೆ ಅದರ ಅಧ್ಯಕ್ಷರಾಗಿದ್ದರು. ಈ ನಡುವೆ ಮಹತ್ವದ ಜವಾಬ್ದಾರಿ ಇರುವಾಗ ಮತ್ತು ಹಜ್ ಯಾತ್ರೆಗೆ ಹೋದ ಸಂದರ್ಭದಲ್ಲಿಯೂ ಅಧ್ಯಕ್ಷತೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದರು.
ಚಿಕ್ಕ ಹೆಸರಿಗೆ ದೀರ್ಘ ವಿಶೇಷಣಗಳು!ಅಬ್ದುಲ್ಲಾ ಸಾಹೇಬರು ಕರಾವಳಿಯ ಇತಿಹಾಸದಲ್ಲಿ ಒಂದು ದಂತಕಥೆ ಎನಿಸಿದವರು. ಹೆಸರಿನಲ್ಲಿಯೂ ವೈಶಿಷ್ಟ್ಯವಿದೆ. ಅವರ ಹೆಸರು ಬಹಳ ದೀರ್ಘ. ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಮ್ ಸಾಹೇಬ್ ಬಹಾದ್ದೂರ್. ಇಷ್ಟು ದೀರ್ಘ ಹೆಸರಿಗೆ ಕಾರಣ ಖಾನ್ ಬಹಾದ್ದೂರ್ ಮತ್ತು ಬಹಾದ್ದೂರ್ ವಿಶೇಷಣವನ್ನು ಬ್ರಿಟಿಷರು ಕೊಟ್ಟದ್ದು, ಖಾನ್ ಸಾಹೇಬ್ ಬಿರುದು 1909ರಲ್ಲಿಯೂ ಖಾನ್ ಬಹಾದ್ದೂರ್ 1920ರಲ್ಲಿಯೂ ಸಿಕ್ಕಿತ್ತು. ಅವರು ಎರಡು ಬಾರಿ ಹಜ್ ಯಾತ್ರೆ ಮಾಡಿದ ಕಾರಣ ಎರಡು ಬಾರಿ ಹಾಜಿ ಶಬ್ದದ ವಿಶೇಷಣವಿದೆ. ಅವರ ಮೂಲ ಹೆಸರು ಅಬ್ದುಲ್ಲಾ ಖಾಸಿಂ ಎಂದು ಮಾತ್ರ. ಸಾಹೇಬ್ ಎನ್ನುವುದು ಗೌರವ ಸೂಚಕ ಶಬ್ದ. ಅವರ ಸಹಿಯಲ್ಲಿಯೂ ಅಬ್ದುಲ್ಲಾ ಖಾಸಿಂ ಎಂದು ಮಾತ್ರ ಇದೆ ಎನ್ನುವುದನ್ನು ಉಡುಪಿಯ ಹಾಜಿ ಅಬ್ದುಲ್ಲಾ ಮೆಮೋರಿಯಲ್ ಕಾರ್ಪೊರೇಶನ್ ಬ್ಯಾಂಕ್ ಹೆರಿ ಟೇಜ್ ಮ್ಯೂಸಿಯಂ ಕ್ಯುರೇಟರ್ ಜಯಪ್ರಕಾಶ ರಾವ್ ಬೆಟ್ಟು ಮಾಡುತ್ತಾರೆ.
ಇಲ್ಲಿ ಒಂದು ಸಂದೇಹ ಬರುತ್ತದೆ. ಖಾನ್ ಬಹಾ ದ್ದೂರ್, ಬಹಾದ್ದೂರ್ ಎಂಬ 2 ವಿಶೇಷಣಗಳನ್ನು ಬ್ರಿಟಿಷರು ಕೊಟ್ಟದ್ದು. ಗಾಂಧೀಜಿ ಅಸಹಕಾರ ಚಳವಳಿ ಯನ್ನು ಆರಂಭಿಸಿ ಇಂತಹ ಪ್ರಶಸ್ತಿಗಳನ್ನು ತ್ಯಾಗ ಮಾಡಲು ಕರೆ ನೀಡಿದ್ದರು. 1920ರ ಮಂಗಳೂರು ಭೇಟಿಯಲ್ಲಿಯೂ ಇದೇ ಕರೆ ಕೊಟ್ಟಿದ್ದರು. ಆದರೂ ಈ ಪದವಿ ವಿಶೇಷಣಗಳು ಈಗಲೂ ಅಬ್ದುಲ್ಲಾರ ಹಿಂದೆ ಮುಂದೆ ರಾರಾಜಿಸುತ್ತಿವೆಯಲ್ಲ? “ಕೆಲವು ವ್ಯಕ್ತಿಗಳು ಗೌರವ ಡಾಕ್ಟರೇಟ್ ಸಿಕ್ಕಿದರೂ “ಡಾ|’ ಎಂದು ಹಾಕಿಕೊಳ್ಳುವುದಿಲ್ಲ. ಇನ್ನಾರೋ ಹೆಸರು ಬರೆಯುವಾಗ ಇದನ್ನು ಹಾಕುತ್ತಾರೆ. ಇದೇ ರೀತಿ ಅಬ್ದುಲ್ಲಾರು ವಿಶೇಷಣಗಳನ್ನು ಬಳಸಿರುವುದು ಕಾರ್ಪೊರೇಶನ್ ಬ್ಯಾಂಕ್ ಸ್ಥಾಪಕ ಆಡಳಿತ ಮಂಡಳಿ ಪಟ್ಟಿಯಲ್ಲಿಯಾಗಲೀ ಇತರ ದಾಖಲೆಗಳಲ್ಲಾಗಲೀ ಕಂಡುಬರುವುದಿಲ್ಲ. ದಿ| ಎಂ.ವಿ.ಕಾಮತ್ ಬರೆದ “ಕಾರ್ಪೊರೇಶನ್ ಬ್ಯಾಂಕ್- ಎ ಕಾರ್ಪೊರೇಟ್ ಜರ್ನಿ’ ಪುಸ್ತಕದಲ್ಲಿಯೂ ಹೆಸರಿನ ಜತೆ ವಿಶೇಷಣಗಳು ಕಾಣುತ್ತಿಲ್ಲ’ ಎನ್ನುತ್ತಾರೆ ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ
ಯು. ವಿನೀತ್ ರಾವ್. – ಮಟಪಾಡಿ ಕುಮಾರಸ್ವಾಮಿ