ಮೈಸೂರು: ಸರ್ಕಾರ ರೈತರಿಂದ ಖರೀದಿ ಮಾಡಿದ್ದ ಭತ್ತ, ರಾಗಿಗೆ 2 ತಿಂಗಳಿನಿಂದ ಹಣ ಪಾವತಿಸದೇ ಇರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ರೈತರು ಬೆಳೆದ ತರಕಾರಿ, ಆಹಾರ ಬೆಳೆ ಹಾಗೂ ಹಣ್ಣುಗಳಿಗೆ ಮಾರುಕಟ್ಟೆ ಲಭ್ಯವಾಗದೆ, ಬೆಲೆಯೂ ಸಿಗದೇ ಅತಂತ್ರರಾಗಿರುವ ಸ್ಥಿತಿಯಲ್ಲಿ, ಸರ್ಕಾರ ವರ್ಷದ ಆರಂಭದಲ್ಲಿ ರೈತರಿಂದ ಖರೀದಿಸಿದ್ದ ರಾಗಿ, ಭತ್ತದ ಹಣ ನೀಡದೇ ವಿಳಂಬ ಮಾಡುತ್ತಿರುವುದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ.
ಜಿಲ್ಲೆಯಲ್ಲಿ 2019-20 ಸಾಲಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ವಾಣಿಜ್ಯ ಬೆಲೆಯ ಜೊತೆಗೆ ಭತ್ತ, ರಾಗಿ ಬೆಳೆ ಬೆಳೆದಿದ್ದರು. ಸರ್ಕಾರ ಕನಿಷ್ಠ ಬೆಂಬಲ ಬೆಲೆ ಮೂಲಕ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ರೈತರಿಂದ ಭತ್ತ, ರಾಗಿಯನ್ನು ಖರೀದಿಸಿತ್ತು. ಈ ನಡುವೆ ಲಾಕ್‌ಡೌನ್ ಪರಿಣಾಮ ರೈತರು ಬೆಳೆದ ಇತರೆ ಬೆಳೆಗಳು ಉತ್ತಮ ಬೆಲೆಗೆ ಮಾರಾಟವಾಗದೇ ನಷ್ಟಕ್ಕೊಳಗಾಗಿದ್ದಾರೆ. ಬ್ಯಾಂಕು, ಸಹಕಾರ ಸಂಘ ಸೇರಿದಂತೆ ಇತರೆ ಮೂಲಗಳಿಂದ ಬಡ್ಡಿ ಆಧಾರದಲ್ಲಿ ಸಾಲ ಪಡೆದು ಬೆಳೆದಿದ್ದ ಬೆಳೆಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಗೆ ಖರೀದಿ ಕೇಂದ್ರಗಳ ಮೂಲಕ ಖರೀದಿಸಿದ್ದ ಭತ್ತ, ರಾಗಿಗೆ ಸರ್ಕಾರ ಎರಡು ತಿಂಗಳಾದರೂ ಹಣ ಪಾವತಿಸಿಲ್ಲ.
2019-20ನೇ ಸಾಲಿನ ಮೊದಲ ಹಂಗಾಮಿನಲ್ಲಿ ರೈತರು ತಂಬಾಕು, ಶುಂಠಿ, ಮೆಕ್ಕೆ ಜೋಳ, ಭತ್ತ ಬೆಲೆಯುವುದು ವಾಡಿಕೆ. ನಂತರ ಹಿಂಗಾರಿ ನಲ್ಲಿ ಸಂಪೂರ್ಣವಾಗಿ ಆಹಾರ ಬೆಳೆಯಾದ ಭತ್ತ, ರಾಗಿ ಜೊತೆಗೆ ಹುರುಳಿ, ಅವರೆ, ಹಲಸಂ ದೆ ಧಾನ್ಯ ಬೆಳೆಯುತ್ತಾರೆ. ರೈತರು ಈಗಾಗಲೇ ಸರ್ಕಾರಕ್ಕೆ ರಾಗಿ, ಭತ್ತವನ್ನು ಮಾರಾಟ ಮಾಡಿರುವುದರಿಂದ ಇತ್ತ ಬೆಳೆಯೂ ಇಲ್ಲ, ಹಣವೂ ಇಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ.
ಸಾಲದ ಸುಳಿಯಲ್ಲಿ ರೈತರು: ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು ಎಲ್ಲೆಡೆ ಬಿತ್ತನೆ ಕಾರ್ಯ ನಡೆಯುತ್ತಿದೆ. ಆದರೆ, ಬಿತ್ತೆನೆಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ, ಉಳುಮೆ ಸೇರಿದಂತೆ ಮತ್ತಿತರ ಖರ್ಚುಗಳಿಗೆ ರೈತರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದ್ಕಕಾಗಿ ಸಾಲದ ಮೊರೆ ಹೋಗಿರುವ ರೈತರು ಬಡ್ಡಿ ಸಾಲ ಮಾಡುವ ಮೂಲಕ ಬಿತ್ತನೆ ಕಾರ್ಯ ಮಾಡುವಂತಾಗಿದೆ. ಸರ್ಕಾರ ರೈತರಿಗೆ ತಕ್ಷಣವೇ ಹಣ ಪಾವತಿಸಿ ದ್ದರೆ ರೈತರು ಸಾಲದ ಮೊರೆ ಹೋಗುವುದು ತಪ್ಪಿದಂದಂತಾಗುತ್ತಿತ್ತು.
ಜಿಲ್ಲೆಯಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶ ದಲ್ಲಿ ರಾಗಿ, 1 ಲಕ್ಷ ಹೆಕ್ಟೇರ್‌ನಲ್ಲಿ ಭತ್ತವನ್ನು ಬೆಳೆದಿದ್ದರು. ಕೇಂದ್ರ ಪ್ರತಿ ಕ್ವಿಂಟಾಲ್ ರಾಗಿಗೆ 3100 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದರೆ, ಭತ್ತಕ್ಕೆ 1815 ರೂ. ಬೆಂಬಲ ಬೆಲೆ ಘೋಷಿಸಿತ್ತು. ಇದಕ್ಕೆ ರಾಜ್ಯ ಸರ್ಕಾರ 200 ರೂ. ಹಣ ಸೇರಿಸಿದ್ದು, 2015 ರೂ. ಬೆಂಬಲ ಬೆಲೆಯಾಗಿತ್ತು. ಬೆಲೆ ಹೆಚ್ಚಿದ ಪರಿಣಾಮ ಎಲ್ಲಾ ರೈತರು ತಾವು ಬೆಳೆದ ಬೆಳೆಯನ್ನು ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಿದ್ದರು.
ಕಳೆದ ಬಾರಿ ಬೆಳೆದ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಿದ್ದೆವು. ಸರ್ಕಾರ ಖರೀದಿಸಿದ್ದ ರಾಗಿಗೆ ಹಣ ಪಾವತಿಸಿದ್ದರೆ ಹಣದ ಸಮಸ್ಯೆ ಕಡಿಮೆಯಾಗುತ್ತಿತ್ತು.
-ಗೋವಿಂದಪ್ಪ, ರೈತ
* ಸತೀಶ್ ದೇಪುರ