ಜೈಪುರ : ರಾಜಸ್ಥಾನದ ಆರೋಗ್ಯ ಸಚಿವ ಕಾಳೀಚರಣ್ ಸರಾಫ್ ಅವರು ನಗರದ ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡುವ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಭಾರತೀಯ ಜನತಾ ಪಕ್ಷದ “ಸ್ವಚ್ಚ ಭಾರತ’ ಅಭಿಯಾನವನ್ನು ಗೇಲಿ ಮಾಡಿದೆ.
ಕಾಂಗ್ರೆಸ್ ನಾಯಕ ರಘು ಶರ್ಮಾ ಅವರು ಬಿಜೆಪಿ ಸಚಿವ ಕಾಳೀಚರ್ ಸರಾಫ್ ಅವರು ತಮ್ಮ ಈ ನಾಚಿಕೆಗೇಡಿನ ಕೃತ್ಯಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
“ಸರಕಾರ ಸ್ವಚ್ಚ ಭಾರತ ಅಭಿಯಾನದ ಬಗ್ಗೆ ಮಾತನಾಡುತ್ತದೆ; ಆದರೆ ಅದರ ಸಚಿವರು ಸಾರ್ವಜನಿಕವಾಗಿ ಗೋಡೆ ಮೇಲೆ ಮೂತ್ರ ಹೊಯ್ಯತ್ತಾರೆ. ರಾಜ್ಯ ಸರಕಾರಕ್ಕೆ ಇದೊಂದು ನಾಚಿಕೆಗೇಡಿನ ವಿಷಯ; ಆದುದರಿಂದ ಆರೋಗ್ಯ ಸಚಿವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು’ ಎಂದು ಶರ್ಮಾ ಹೇಳಿದರು.
ಬಿಜೆಪಿ ನಾಯಕರು ಈ ರೀತಿಯ ನಾಚಿಕೆಗೇಡಿನ ಕೃತ್ಯ ನಡೆಸುವ ಮೂಲಕ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಾರೆ. ಸಚಿವರಿಂದ ತಮ್ಮ ಕ್ಷೇತ್ರದಲ್ಲೇ ಈ ರೀತಿಯ ಕೃತ್ಯ ನಡೆಯಬಾರದಿತ್ತು ಎಂದು ಕಾಂಗ್ರೆಸ್ ರಾಜಸ್ಥಾನದ ಘಟಕದ ಉಪಾಧ್ಯಕ್ಷೆ ಅರ್ಚನಾ ಶರ್ಮಾ ಹೇಳಿದ್ದಾರೆ.
ಅರ್ಚನಾ ಶರ್ಮಾ ಮುಂದುವರಿದು, “ಸಚಿವ ಸರಾಫ್ ಅವರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಇದೇ ಮೊದಲ ಪ್ರಕರಣವೇನೂ ಅಲ್ಲ. ಈ ಧರದ್ದನ್ನು ಅವರು ಹಿಂದೆಯೂ ಮಾಡಿದ್ದಾರೆ. ಧೋಲ್ ಪುರ ಉಪಚುನಾವಣೆ ಸಂಬಂಧ ನಾವು ಅವರ ಜತೆಗೆ ಹೋಗಿದ್ದಾಗ ಅವರುಆ ಸಂದರ್ಭದಲ್ಲೂ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಾರೆ’ ಎಂದು ಹೇಳಿದರು.