Advertisement

ಸರಕಾರ ಕೃಷಿ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ನೀಡಲಿ: ಚಟ್ನಳ್ಳಿ

07:10 AM Feb 25, 2019 | |

ಚಿಕ್ಕಮಗಳೂರು: ಸರ್ಕಾರವು ಕೃಷಿ ಉತ್ಪನ್ನಗಳಿಗೆ ಖಚಿತವಾದ ಬೆಲೆ ನೀತಿ ಜಾರಿಗೊಳಿಸಿದರೆ, ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದರೆ ರೈತರ ಆತ್ಮಹತ್ಯೆ ಶೇ 90 ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಸಾಹಿತಿ ಚಟ್ನಳ್ಳಿ ಮಹೇಶ್‌ ಹೇಳಿದರು.

Advertisement

ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಘಟಕದ ವತಿಯಿಂದ ನಗರದ ಎಐಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ರೈತರ ಆತ್ಮಹತ್ಯೆಗೆ ಕಾರಣ ಮತ್ತು ಪರಿಹಾರ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಇವೆಲ್ಲವೂ ರೈತರನ್ನು ಬಾಧಿಸುತ್ತವೆ. ರೈತ ಸಮುದಾಯದ ಸಂಕಷ್ಟಗಳಿಗೆ ನಿಸರ್ಗದ ಸಿಟ್ಟಿನ ಜತೆಗೆ ಪ್ರಭುತ್ವ ಮಾಡುತ್ತಿರುವವರ ಅನ್ಯಾಯ ಕಾರಣ ಎಂದರು.
 
ರೈತರಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಪ್ರಭುತ್ವ ಎಷ್ಟು ಆಸ್ಥೆ ವಹಿಸಿದೆ ಎಂದು ಚಿಂತಿಸಬೇಕಿದೆ. ಜಲಕ್ಷಾಮ ರೈತರನ್ನು ವಿಪರೀತವಾಗಿ ಕಾಡುತ್ತಿದೆ. ಕೊಳವೆಬಾವಿ ನಂಬಿಕೊಂಡು ರೈತರು ತೊಂದರೆಗೆ ಸಿಲುಕಿದ್ದಾರೆ. ರೈತರು ತ್ರಿಶಂಕು ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಕೃಷಿ ಸಾಮೂಹಿಕ ಪ್ರಜ್ಞೆ.
ಈ ಸಾಮೂಹಿಕ ಪ್ರಜ್ಞೆ ಪೆಟ್ಟು ಬಿದ್ದಿದೆ. ಕಷ್ಟಕ್ಕೆ ಸ್ಪಂದಿಸುವವರು ಯಾರೂ ಇಲ್ಲ ಎಂಬ ವೇದನೆ ರೈತರನ್ನು ಕಾಡುತ್ತಿದೆ ಎಂದು ಹೇಳಿದರು.

ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿಪಡಿಸಬೇಕು. ಕನಿಷ್ಠ ಬೆಲೆಗಿಂತ ಕಡಿಮೆಗೆ ಮಾರಾಟವಾಗದಂತೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಕಾನೂನು ರೂಪಿಸಬೇಕು. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಹೊಲ, ಜಮೀನು, ತೋಟಗಳಿಗೆ ಕಳಿಸಿ ರೈತರಿಗೆ ಮಾರ್ಗದರ್ಶನ ನೀಡುವಂತೆ ಮಾಡಬೇಕು ಎಂದು ಸಲಹೆ ನೀಡಿದರು. 

ಉತ್ಪನ್ನ ಮಾರಾಟದಿಂದ ಉತ್ಪಾದಕರಿಗೆ ಲಾಭದ ಗರಿಷ್ಠ ಪಾಲು ಸಿಗುವಂತಾಗಬೇಕು. ದಲ್ಲಾಳಿಗಳು, ಮಧ್ಯವರ್ತಿಗಳು ಹೆಚ್ಚು ಲಾಭ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು. ಉತ್ಪಾದಕರಿಗೆ ಲಾಭವಾಗುವಂಥ ಬೆಲೆ ನೀತಿಯನ್ನು ಜಾರಿಗೊಳಿಸಿದರೆ, ಅದು ರೈತರಿಗೆ ಸರ್ಕಾರು ನೀಡುವ ದೊಡ್ಡ ಕೊಡುಗೆ ಎಂದರು.

Advertisement

ಕೃಷಿ ಐಷಾರಾಮವನ್ನು ಕೊಡುವುದಿಲ್ಲ. ಅದು ನಮ್ಮ ಅಗತ್ಯ, ಆಸೆ ಪೂರೈಸುತ್ತದೆ. ದುರಾಸೆಯನ್ನಲ್ಲ. ರೈತರು ಧೃತಿಗೆಡಬಾರದು. ರೈತರು ಬೃಹತ್‌ ಉದ್ಯಮಿಗಳು, ಆಗರ್ಭ ಶ್ರೀಮಂತರೊಂದಿಗೆ ತಮ್ಮನ್ನ ಹೋಲಿಸಿಕೊಳ್ಳಬಾರದು ಎಂದು ಹೇಳಿದರು.

ಶೈಕ್ಷಣಿಕ ಪತ್ರಗಳು ಮರಣ ಪತ್ರಗಳಾಗುತ್ತಿವೆ. ಕೃಷಿ ಅರಿವಿಲ್ಲದವರು, ಅಂಗೈ ಅಗಲ ಜಮೀನು ಇಲ್ಲದವರು ಕೃಷಿ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುತ್ತಾರೆ. ಕೃಷಿಯಿಂದ ವಿಮುಖರಾಗಿ ಹಲವರು ನಗರಗಳಿಗೆ ವಲಸೆ ಹೋಗಿದ್ದಾರೆ. ಅಲ್ಲಿ ನೆಮ್ಮದಿ ಹುಡುಕುವುದರಲ್ಲಿ ತೊಡಗಿದ್ದಾರೆ. ನಗರಗಳ ಬದುಕು ಥಳಕು ಬಳಕು ಅಷ್ಟೇ. ನಮ್ಮ ಕೃಷಿಗೆ ಕಾಯಕಲ್ಪ ಸಿಗಬೇಕಾದರೆ ವಲಸೆ ಹೋಗಿರುವವರು ವಾಪಸ್‌ ಬರಬೇಕು. ಕೃಷಿ ಚರಿತ್ರ ಪುನರಾವರ್ತನೆ ಆಗಬೇಕು ಎಂದು ಹೇಳಿದರು. ಎಐಟಿ ಪ್ರಾಚಾರ್ಯ ಪ್ರೊ| ಜಯದೇವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next