ಬೆಂಗಳೂರು: ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟ ಭರವಸೆ ಈಡೇರಿಸಬೇಕು. ಮಾ.15ರಂದು ನೀವು ಕೊಟ್ಟ ಗಡುವು ಮುಕ್ತಾಯವಾಗಲಿದೆ. ನೌಕರರ ಬೇಡಿಕೆ ಈಡೇರಿಸದೆ, ಸರ್ಕಾರ ವಚನ ಭ್ರಷ್ಟವಾಗಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರಕ್ಕೆ ಎಚ್ಚರಿಸಿದರು.
ರಾಜ್ಯ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಮೌರ್ಯ ವೃತ್ತದಲ್ಲಿ ಹಮ್ಮಿಕೊಂಡ ಬೃಹತ್ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೌಕರರ ಒಂಭತ್ತು ಬೇಡಿಕೆ ಈಡೇಸುತ್ತೇವೆ ಎಂದು ಸರ್ಕಾರ ಲಿಖಿತ ಭರವಸೆ ಕೊಟ್ಟು ಮೌನವಾಗಿದೆ. ಸರ್ಕಾರಕ್ಕೆ ನೀಡಿದ ಮೂರು ತಿಂಗಳ ಗಡುವು ಮಾರ್ಚ್ 15ರಂದು ಮುಗಿಯುತ್ತಿದೆ. ಹೀಗಾಗಿ, ಸರ್ಕಾರವನ್ನು ಎಚ್ಚರಿಸಲು ಸಾಂಕೇತಿಕವಾಗಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಶೀಘ್ರ ಆರನೇ ವೇತನ ಆಯೋಗ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಮಾತಿನಲ್ಲಿ ಹೊಟ್ಟೆ ತುಂಬಲ್ಲ: ಸಚಿವ ಲಕ್ಷ್ಮಣ ಸವದಿ, ತಪ್ಪು ಮಾತುಗಳನ್ನು ಆಡಬಾರದು. ಜವಾಬ್ದಾರಿ ಮಂತ್ರಿಯಾಗಿ ಮಾತನಾಡಬೇಕು. ಒಂಭತ್ತು ಬೇಡಿಕೆಯಲ್ಲಿ ಯಾವುದು ಕಾರ್ಯಗತವಾಗಿದೆ ತಿಳಿಸಬೇಕು. ಬರೀ ಮಾತಿನಲ್ಲಿ ಹೊಟ್ಟೆ ತುಂಬಲ್ಲ. ಸ್ಪಷ್ಟ ಆದೇಶ ಹೊರಡಿಸಬೇಕು ಎಂದು ಪರೋಕ್ಷವಾಗಿ ಸಚಿವ ಲಕ್ಷ್ಮಣ ಸವದಿಗೆ ಕುಟುಕಿದರು.
ಸಾರಿಗೆ ಇಲಾಖೆಯು ಸೇವಾ ಕ್ಷೇತ್ರವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾರಿಗೆ ನೌಕರರ ಮನವಿಗೆ ಸ್ಪಂದಿಸಬೇಕು. ಹೊಸ ಬಸ್ ಗಳನ್ನು ಸಾಲ ಮಾಡಿ ಖರೀದಿಸುವ ಮನಸ್ಸು ಮಾಡುವ ಸರ್ಕಾರ, ಸಾರಿಗೆ ನೌಕರರ ಬೇಡಿಕೆ ಏಕೆ ಈಡೇರಿಸಿಲ್ಲ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ:ರಾಹುಲ್ ಗಾಂಧಿಗೆ ಚಿಕಿತ್ಸೆಯ ಅಗತ್ಯವಿದೆ: ಶೋಭಾ ಕರಂದ್ಲಾಜೆ
ಟ್ರಾಫಿಕ್ ಕಿರಿಕಿರಿ: ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ, ವಾಹನ ಸವಾರರು ಅನಿವಾರ್ಯವಾಗಿ ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾಯಿತು. ಮೌರ್ಯ ವೃತ್ತ ಮಾರ್ಗದಿಂದ ಮೆಜೆಸ್ಟಿಕ್, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್, ಗಾಧಿನಗರ, ಫ್ರೀಡಂ ಪಾರ್ಕ್, ಕೆ.ಆರ್.ಸರ್ಕಲ್ ಗೆ ತೆರಳುವ ವಾಹನ ಸವಾರರು, ಟ್ರಾಫಿಕ್ ಸಮಸ್ಯೆಯಿಂದ ಹರಸಾಹಸ ಪಟ್ಟ ದೃಶ್ಯ ಕಂಡು ಬಂದಿತು. ಪ್ರತಿಭಟನೆ ನಡೆಯುವ ವಿಷಯ ತಿಳಿಯದೇ, ಎಂದಿನಂತೆ ಅದೇ ರಸ್ತೆಯಲ್ಲಿ ತೆರಳಲು ಮುಂದಾದ ದ್ವಿಚಕ್ರ ವಾಹನ ಸವಾರರು ಅನಿವಾರ್ಯವಾಗಿ ಪೊಲೀಸರ ಬಿರು ಮಾತಿಗೆ ತುತ್ತಾದರು.