Advertisement

Govt ಉಭಯ ಜಿಲ್ಲೆಯ ಸರಕಾರಿ ಶಾಲೆಗಳು ನಿರಾಳ: ಶಾಲಾ ಮಕ್ಕಳ ಶೂ, ಸಾಕ್ಸ್‌ ಮತ್ತು ಚಪ್ಪಲಿ

11:59 PM Dec 08, 2023 | Team Udayavani |

ಉಡುಪಿ: ಸರಕಾರ ಅಥವಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ನಿರ್ದೇಶನವನ್ನು ಉಲ್ಲಂಘಿಸಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ಬದಲಿಗೆ ಸ್ಯಾಂಡಲ್‌ (ಚಪ್ಪಲಿ) ವಿತರಿಸಿದ ಶಾಲಾ ಮುಖ್ಯಶಿಕ್ಷಕರು ಸಹಿತ ಎಸ್‌ಡಿಎಂಸಿಗಳ ವಿರುದ್ಧ ಇಲಾಖೆಯಿಂದ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಸ್ಯಾಂಡಲ್‌ ವಿತರಿಸಿದ್ದರೂ ಯಾವುದೇ ಸಮಸ್ಯೆಯಾಗದು.

Advertisement

ಕರಾವಳಿ, ಮಲೆನಾಡು ಪ್ರದೇಶದಲ್ಲಿ ಮಳೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ಆಯಾ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಧರಿಸಲು ಹಾಗೂ ತೆಗೆಯಲು ಅನುಕೂಲವಾಗುವಂತೆ ಶೂ, ಸಾಕ್ಸ್‌, ಸ್ಯಾಂಡಲ್‌ಗ‌ಳನ್ನು ಶಾಲಾ ಮೇಲುಸ್ತುವಾರಿ ಸಮಿತಿ ನಿರ್ಣಯದಂತೆ ಖರೀದಿಸಿ, ವಿತರಿಸಲು ಅನುಮತಿಯನ್ನು ಇಲಾಖೆ ನೀಡಿತ್ತು. ಅದರಂತೆ ಉಡುಪಿಯ ಶಾಲೆಗಳಲ್ಲಿ ಹಾಗೂ ದ.ಕ. ಕೆಲವು ಶಾಲೆಗಳಲ್ಲಿ ಸ್ಯಾಂಡಲ್‌ ವಿತರಣೆ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ಬದಲಿಗೆ ಸ್ಯಾಂಡಲ್‌ ನೀಡಲಾಗಿದೆ ಎಂದು ಪಾಲಕ, ಪೋಷಕರು ಇಲಾಖೆಗೆ ದೂರು ಸಲ್ಲಿಸಿದ್ದರು. ಇದು ಶಿಕ್ಷಣ ಸಚಿವರ ಗಮನಕ್ಕೂ ಬಂದಿತ್ತು. ಸರಕಾರದ ಆದೇಶದಂತೆ ಶೂ, ಸಾಕ್ಸ್‌ ಬದಲಿಗೆ ಚಪ್ಪಲಿ ವಿತರಣೆ ಮಾಡಿದ್ದಲ್ಲಿ ಸಮಸ್ಯೆಯಿಲ್ಲ. ನಿಯಮ ಉಲ್ಲಂ ಸಿ ಚಪ್ಪಲಿ ವಿತರಣೆ ಮಾಡಿದ್ದಲ್ಲಿ ಅಂತಹ ಶಾಲಾಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಯ ಶಿಸ್ತು ಕ್ರಮ ಎದುರಿಸಲಿದ್ದಾರೆ.

1ರಿಂದ 5ನೇ ತರಗತಿ ಮಕ್ಕಳ ಒಂದು ಜತೆ ಶೂ, ಸಾಕ್ಸ್‌ ಅಥವಾ ಚಪ್ಪಲಿ ಖರೀದಿಗೆ ಇಲಾಖೆಯಿಂದ 265 ರೂ., 6ರಿಂದ 8ನೇ ತರಗತಿ ಮಕ್ಕಳ ಶೂ, ಸಾಕ್ಸ್‌ ಅಥವಾ ಚಪ್ಪಲಿ ಖರೀದಿಗೆ 295 ರೂ. ಹಾಗೂ 9 ಮತ್ತು 10ನೇ ತರಗತಿ ಮಕ್ಕಳ ಶೂ, ಸಾಕ್ಸ್‌ ಅಥವಾ ಚಪ್ಪಲಿ ಖರೀದಿಗೆ 325 ರೂ. ನೀಡಲಾಗಿದೆ. ಚಪ್ಪಲಿಗೂ ಖರೀದಿಗೂ ನಿರ್ದಿಷ್ಟ ಅನುದಾನವೇ ಬಳಸಬೇಕು. ಖರೀದಿಯಲ್ಲಿ ಅವ್ಯವಹಾರ, ಲೋಪ ಮಾಡಬಾರದು ಎಂಬ ನಿರ್ದೇಶನವನ್ನು ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆ ಹೆಚ್ಚಿರುವುದರಿಂದ ಎಸ್‌ಡಿಎಂಸಿ ನಿರ್ಧಾರದಂತೆ ಸ್ಯಾಂಡಲ್‌ ಖರೀದಿಗೆ ಇಲಾಖೆಯಿಂದ ಅವಕಾಶ ನೀಡಲಾಗಿದೆ. ನಗರ ಪ್ರದೇಶ ಅಥವಾ ಜಿಲ್ಲಾ ಕೇಂದ್ರದ ಕೆಲವು ಶಾಲೆಗಳಲ್ಲಿ ಶೂ, ಸಾಕ್ಸ್‌ ಖರೀದಿಸಿದ್ದಾರೆ.

Advertisement

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಚಿಕ್ಕಮಗಳೂರು, ದಾವಣಗೆರೆ, ಗದಗ, ಶಿರಸಿ, ಶಿವಮೊಗ್ಗ, ಉಡುಪಿ ಹಾಗೂ ದ.ಕ.ದ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಚಪ್ಪಲಿ ವಿತರಣೆ ಮಾಡಲಾಗಿದೆ. ಉಳಿದೆಲ್ಲ ಜಿಲ್ಲೆಗಳಲ್ಲೂ ಶೂ, ಸಾಕ್ಸ್‌ ವಿತರಿಸಲಾಗಿದೆ. ಉಡುಪಿಯಲ್ಲಿ 39,368 ಹಾಗೂ ದ.ಕ.ದಲ್ಲಿ 16,819, ಶಿವಮೊಗ್ಗದಲ್ಲಿ 915, ಗದಗದಲ್ಲಿ 423, ಚಿಕ್ಕಮಗಳೂರಿನಲ್ಲಿ 9473 ಮಕ್ಕಳಿಗೆ ಚಪ್ಪಲಿ ವಿತರಿಸಲಾಗಿದೆ.

ಸರಕಾರದ ನಿಯಮಾನುಸಾರವಾಗಿ ಶೂ, ಸಾಕ್ಸ್‌ ಬದಲಿಗೆ ಚಪ್ಪಲಿ ವಿತರಣೆ ಮಾಡಿದ್ದಲ್ಲಿ ಯಾವುದೇ ಸಮಸ್ಯೆಯಿಲ್ಲ. ಸರಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ನಿಯಮ ಮೀರಿ ನಿರ್ಧಾರ ತೆಗೆದುಕೊಂಡಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಆಗಲಿದೆ.
– ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next