Advertisement

ಶಿಕ್ಷಣಕ್ಕೆ ಗರಿಷ್ಟ  ಆದ್ಯತೆ ಅಗತ್ಯ: ಡಾ|ಭರತ್‌ ಶೆಟ್ಟಿ

02:38 PM Jun 19, 2018 | Team Udayavani |

ಕಾವೂರು: ಸರಕಾರ ರಸ್ತೆ, ನೀರು, ಒಳಚರಂಡಿ, ನೀರಾವರಿ ಮತ್ತಿತರ ಯೋಜನೆಗಳಿಗೆ ಕೊಡುವಷ್ಟೇ ಮಹತ್ವವನ್ನು ಶಿಕ್ಷಣಕ್ಕೆ ನೀಡಬೇಕಿದೆ. ಸಾಕಷ್ಟು ಪ್ರೋತ್ಸಾಹ ಸಿಗದೇ ಶಿಕ್ಷಕರು, ಸರಕಾರಿ ಶಾಲೆಗಳು ಸಮಸ್ಯೆ ಎದುರಿಸುವಂತಾಗಿದೆ. ಖಾಸಗಿ ಕಂಪನಿಗಳಿಗೆ ಮನವಿ ಮಾಡಿಕೊಂಡು, ದಾನಿಗಳಿಂದ ಗುರುತಿಸಿ ಸರಕಾರಿ ಶಾಲೆಗಳನ್ನು ತಕ್ಕಮಟ್ಟಿಗೆ ನಡೆಸಿಕೊಂಡು ಬರಲಾಗುತ್ತಿದೆ. ಇದರಿಂದ ಶಾಲೆಗಳನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸಲು ಸಾಧ್ಯ. ಎಲ್ಲ ಶಾಸಕರು ಒಗ್ಗೂಡಿ ಸರಕಾರಿ ಶಾಲೆಗಳ ಬೆಳವಣಿಗೆಗೆ ಮುಂದಡಿಯಿಟ್ಟಾಗ ಖಾಸಗಿ ಶಾಲೆಗಳಿಗೂ ಸರಕಾರಿ ಶಾಲೆಗಳು ಸಮಾನಾಗಿ ಶಿಕ್ಷಣ ನೀಡುವಂತೆ ಮಾಡಬಹುದು ಎಂದು ಶಾಸಕ ಡಾ| ವೈ.ಭರತ್‌ ಶೆಟ್ಟಿ ಹೇಳಿದರು.

Advertisement

ಅವರು ಸೋಮವಾರ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾನಗರ, ಪಂಜಿಮೊಗರು ಇಲ್ಲಿ ನೂತನವಾಗಿ ನಿರ್ಮಿಸಿದ ತರಗತಿ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶಿಕ್ಷಣ ವ್ಯವಸ್ಥೆ ಬಲಗೊಳ್ಳಲಿ
ಮಾಜಿ ಶಾಸಕ ಬಿ.ಎ. ಮೊಯಿದಿನ್‌ ಬಾವಾ ಅವರು ಸ್ಮಾರ್ಟ್‌ ಕ್ಲಾಸ್‌ ಯೋಜನೆಗೆ ಚಾಲನೆ ನೀಡಿ, ವಿದೇಶಗಳಿಗೆ ಭಾರತ ಪೈಪೋಟಿ ನೀಡಬೇಕಾದರೆ ಶಿಕ್ಷಣ ವ್ಯವಸ್ಥೆ ಪ್ರಬಲವಾಗಿರಬೇಕು. ಎಪ್ಪತ್ತು ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಆದ ಸುಧಾರಣೆಗಳಿಂದ ಭಾರತವನ್ನು ವಿಶ್ವ ಗುರುತಿಸುವಂತಾಗಿದೆ. ಸರಕಾರಿ ಶಾಲೆಗಳು ಇನ್ನಷ್ಟು ಸುಧಾರಿಸಿದಾಗ ಸಾಮಾನ್ಯ ವರ್ಗದ ಮಕ್ಕಳೂ ಕೂಡ ಪ್ರತಿಭಾ ಸಂಪನ್ನರಾಗಿ ಇತರರಂತೆ ಉತ್ತಮ ಸ್ಥಾನಮಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದರು.

ಶಾಲೆಗಳಿಗೆ ಸಹಕಾರ ಅಗತ್ಯ
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಪೊರೇಟರ್‌ ದಯಾನಂದ ಶೆಟ್ಟಿ, ಪಂಜಿಮೊಗರು ಶಾಲೆಯಲ್ಲಿ ಆರುನೂರು
ಇದ್ದ ವಿದ್ಯಾರ್ಥಿಗಳ ಸಂಖ್ಯೆ ಇನ್ನೂರಕ್ಕೆ ಇಳಿದಾಗ ಸಮಸ್ಯೆಯನ್ನು ಮನಗಂಡು ಪ್ರಾಥಮಿಕ ಪೂರ್ವ ತರಗತಿ ಆರಂಭಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದೇವೆ. ದಾನಿಗಳ, ಸಂಘ ಸಂಸ್ಥೆಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ.ಎಲ್‌., ದಾನಿ ಕೇಶವ ಅಮೀನ್‌ ಕಾವೂರು, ರೌಡ್‌ ಟೇಬಲ್‌ 115ರ ಚೇರ್ಮನ್‌ ವರದರಾಜ್‌, ಲೇಡಿಸ್‌ ಸರ್ಕಲ್‌ನ ಶೇರೋನ್‌ ಪಿಂಟೋ, ಉದ್ಯಮಿಗಳಾದ ಗಿರೀಶ್‌ ಶೆಟ್ಟಿ, ಅಬ್ದುಲ್‌ ರವೂಫ್‌ ಪುತ್ತಿಗೆ, ಶಾಲಾಭಿವೃದ್ಧಿ ಸಮಿತಿಯ ಸಂಚಾಲಕ ಪಿ.ಸಿ. ಕುಮಾರ್‌, ಶಿಕ್ಷಣ ಪೋಷಕ ಅನಂತ ಪೈ, ನಿವೃತ್ತ ಪ್ರೊಫೆಸರ್‌ ನಾ. ದಾಮೋದರ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕಿ ಆಶಾಯಕ್‌, ನಿವೃತ್ತ ಶಿಕ್ಷಕಿಯರಾದ ಸುಮತಿ, ವಿಜಯ ಕಲಾ, ಕ್ಲಸ್ಟರ್‌ ಅಧಿ ಕಾರಿ ಪ್ರಭಾರ ಮುಖ್ಯಶಿಕ್ಷಕಿ ಜಯಲಕ್ಷ್ಮೀ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಗೌರಿ ಮೊದಲಾದವರು ಉಪಸ್ಥಿತರಿದ್ದರು. ವಾಣಿ ಅವರು ಕಾರ್ಯಕ್ರಮ ನಿರೂಪಿಸಿದರು. ವಿಲ್ಮಾ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next