Advertisement

Kunigal: ಎಂಜಿನಿಯರ್‌ ತಂಡದಿಂದ ಸರ್ಕಾರಿ ಶಾಲೆ ಪ್ರಗತಿ

05:42 PM Dec 10, 2023 | Team Udayavani |

ಕುಣಿಗಲ್‌: ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ಬೆಂಗಳೂರಿನ ಸೇವಾ ಹೀ ಪರಮೋಧರ್ಮ ಟ್ರಸ್ಟ್‌ನವರು ಶತಮಾನದ ಇತಿಹಾಸ ಹೊಂದಿರುವ ತಾಲೂಕಿನ ಹೇರೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಬಣ್ಣ ಬಳಿದು ವಿವಿಧ ಮಾದರಿಗಳ ಚಿತ್ರಗಳನ್ನು ಬರೆಯುವ ಮೂಲಕ ಶಾಲೆ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ.

Advertisement

ಪಟ್ಟಣದಿಂದ ಕೇವಲ ನಾಲ್ಕು ಕಿ.ಮೀ ದೂರದ ಹೇರೂರು ಗ್ರಾಮದಲ್ಲಿ 1922ರಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಲಾಗಿತ್ತು. ಈ ಶಾಲೆಯು ತನ್ನದೆಯಾದ ಇತಿಹಾಸ ಪರಂಪರೆ ಹೊಂದಿದೆ. ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಎಂಜಿನಿಯರ್‌, ವಕೀಲರು ಸೇರಿದಂತೆ ವಿವಿಧ ವೃತ್ತಿಯಲ್ಲಿದ್ದಾರೆ. ಈಗ ಈ ಶಾಲೆಗೆ 102 ವಸಂತಗಳು ತುಂಬಿದೆ.

18 ಸರ್ಕಾರಿ ಶಾಲೆಗಳ ಅಭಿವೃದ್ಧಿ: ಬೆಂಗಳೂರಿನ ಐಟಿ, ಬಿಟಿ ಕಂಪನಿ ಸೇರಿದಂತೆ ಸರ್ಕಾರಿ ಉದ್ಯೋಗದಲ್ಲಿರುವ ಎಂಜಿನಿಯರ್‌ಗಳು ಸೇರಿ ಸೇವಾ ಹೀ ಪರಮೋಧರ್ಮ ಟ್ರಸ್ಟ್‌ ಪ್ರಾರಂಭಿಸಿ ರವಿ, ಶಶಿಕಾಂತ್‌, ರವಿಕುಮಾರ್‌, ಸಂಗಮೇಶ್‌, ನವೀನ್‌ಗೌಡ, ರಾಜು, ಪ್ರಸಾದ್‌ ಸೇರಿದಂತೆ 10 ಜನರ ತಂಡವನ್ನು ರಚಿಸಿ, ಆ ಮೂಲಕ ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ಅಳಿವಿನ ಹಂಚಿನಲ್ಲಿರುವ ಶತಮಾನಗಳು ಕಂಡ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಶಿಥಿಲಗೊಂಡ ಶಾಲೆಗಳ ದುರಸ್ಥಿ, ಬಣ್ಣ ಬಳಿಯುವುದು ಮತ್ತು ವಿವಿಧ ಮಾದರಿಗಳ ಗೋಡೆ ಚಿತ್ರಗಳನ್ನು ಬರೆಯುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ರಾಯಚೂರು, ರಾಮನಗರ, ಚಿತ್ರದುರ್ಗ, ತುಮಕೂರು ಸೇರಿದಂತೆ ಅನೇಕ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಸುಮಾರು 18 ಶಾಲೆಗಳ ಜೀರ್ಣೋದ್ಧಾರ ಮಾಡಿದ್ದಾರೆ.

ಎಂಜಿನಿಯರ್‌ಗಳಿಂದ ಸೇವಾ ಕಾರ್ಯ: ಸೇವಾ ಹೀ ಪರಮೋಧರ್ಮ ಟ್ರಸ್ಟ್‌ ಪದಾಧಿಕಾರಿಗಳಲ್ಲಿ ಬಹುತೇಕ ಎಂಜಿನಿಯರ್‌ಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಹೀಗಾಗಿ ಗ್ರಾಮೀಣ ಸರ್ಕಾರಿ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ತಾವು ಎಂಜಿನಿಯರ್‌ ಅಗಿದ್ದರೂ ರಜೆ ದಿನಗಳಲ್ಲಿ ತಾವೇ ಶಾಲೆಗಳಿಗೆ ಭೇಟಿ ನೀಡಿ, ಹಗಲು ರಾತ್ರಿ ಎನ್ನದೇ ಶಾಲಾ ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿದು ವಿವಿಧ ಮಾದರಿಯ ಗೋಡೆ ಚಿತ್ರಗಳನ್ನು ಬರೆದು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿ ಸುತ್ತಿರುವುದು ನಾಗರಿಕರ ಪ್ರಶಂಸೆಗೆ ಕಾರಣವಾಗಿದೆ.

ಹೇರೂರು ಶಾಲೆ ಆಯ್ಕೆ: ಟ್ರಸ್ಟ್‌ ಪದಾಧಿಕಾರಿಗಳು ಇಲ್ಲಿನ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಅವ ರನ್ನು ಭೇಟಿ ಮಾಡಿ ಸುಣ್ಣ, ಬಣ್ಣವಿಲ್ಲದೆ ಹಾಗೂ ದುರಸ್ಥಿ ಯಲ್ಲಿರುವ ಕುಣಿಗಲ್‌ ತಾಲೂಕಿನ ಸರ್ಕಾರಿ ಶಾಲೆ ಗಳನ್ನು ಗುರುತಿಸುವಂತೆ ಮನವಿ ಮಾಡಿತ್ತು. ಈ ದಿಸೆ ಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇರೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಗುರುತಿಸಿ ದ್ದರು. ಟ್ರಸ್ಟ್‌ ಪದಾಧಿಕಾರಿಗಳು ಕಳೆದ 3 ದಿನಗಳಿಂದ ಶಾಲೆ ಕಾಂಪೌಂಡ್‌, ಕೊಠಡಿಗಳಿಗೆ ಸುಣ್ಣ ಬಣ್ಣ ಬಳಿದರು. ನಂತರ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆ ವೃದ್ಧಿಸಲು ಹೊರಾಂ ಗಣ ಗೋಡೆಗಳಿಗೆ ವಿವಿಧ ಮಾದ ರಿಯ ಚಿತ್ರ ಗಳನ್ನು, ಬರೆಯುವ ಮೂಲಕ ಶಾಲೆಗೆ ಮೆರಗು ನೀಡಿದ್ದಾರೆ.

Advertisement

ಸೇವಾ ಹೀ ಪರಮೋಧರ್ಮ ಟ್ರಸ್ಟ್‌ ಪದಾಧಿಕಾರಿಗಳು ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರಿ ಕನ್ನಡ ಶಾಲೆಗಳ ಮೇಲೆ ಅಭಿಮಾನವಿಟ್ಟು, ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಅವರ ಸೇವೆ ಎಲ್ಲರಿಗೂ ಮಾದರಿಯಾಗಲಿ.-ಬೋರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ

ಹಳಿವಿನ ಹಂಚಿನಲ್ಲಿರುವ ಶತಮಾನ ಕಂಡ ಸರ್ಕಾರಿ ಶಾಲೆಗಳ ಜೀರ್ಣೋದ್ಧಾರಕ್ಕೆ ಶ್ರಮಿಸುತ್ತಿರುವ ಸೇವಾ ಹೀ ಪರಮೋಧರ್ಮ ಟ್ರಸ್ಟ್‌ ಪದಾಧಿಕಾರಿಗಳು ಹೇರೂರು ಸರ್ಕಾರಿ ಶಾಲೆಗೆ ಸುಣ್ಣಬಣ್ಣ ಬಳಿದು ಗೋಡೆಗಳಿಗೆ ಚಿತ್ರ ಬರೆದು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿರುವುದು ಅಭಿನಂದನೆ.-ಜಯರಾಮ್‌, ಸಿಆರ್‌ಪಿ 

 -ಕೆ.ಎನ್‌.ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next