2016ರ ಕೊನೆಯಲ್ಲಿ ಬಿಡುಗಡೆಯಾಗಿ 2017ರಲ್ಲಿ ಯಶಸ್ಸನ್ನು ಮುಂದುವರೆಸಿಕೊಂಡು ಹೋಗಿ, ಹಲವು ದಾಖಲೆಗಳನ್ನು ಬರೆದ, ಅನೇಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟ ಸಿನಿಮಾ “ಕಿರಿಕ್ ಪಾರ್ಟಿ’. ರಕ್ಷಿತ್ ಶೆಟ್ಟಿ ನಾಯಕರಾಗಿದ್ದ ಈ ಸಿನಿಮಾವನ್ನು ನಿರ್ದೇಶಿಸಿದವರು ರಿಷಭ್ ಶೆಟ್ಟಿ. ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿ, ಬೇರೆ ಬೇರೆ ಭಾಷೆಗೆ ರೀಮೇಕ್ ರೈಟ್ಸ್ ಮಾರಾಟವಾಗಿ ದೊಡ್ಡ ಸುದ್ದಿಯಾಯಿತು. ಸಹಜವಾಗಿಯೇ ಒಂದು ಕುತೂಹಲವಿತ್ತು, ರಿಷಭ್ ಮುಂದೆ ಯಾವ ಸ್ಟಾರ್‌ಗೆ ಸಿನಿಮಾ ಮಾಡುತ್ತಾರೆ, ಯಾವ ತರಹದ ಸಿನಿಮಾ ಮಾಡುತ್ತಾರೆಂದು. ಆದರೆ, ರಿಷಭ್ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ’ ಸಿನಿಮಾವನ್ನು ಕೈಗೆತ್ತಿಕೊಂಡು, ಕುತೂಹಲ ತಣಿಸಿದರು. ಮಕ್ಕಳನ್ನಿಟ್ಟುಕೊಂಡು ಸರ್ಕಾರಿ ಶಾಲೆಯೊಂದರ ಸುತ್ತ ಕಥೆ ಹೆಣೆದು ಈಗ ಸಿನಿಮಾ ಮುಗಿಸಿಯೇ ಬಿಟ್ಟಿದ್ದಾರೆ ರಿಷಭ್. ಎಲ್ಲಾ ಓಕೆ, “ಕಿರಿಕ್ ಪಾರ್ಟಿ’ ನಂತರದ ಈ ನಿರ್ಧಾರಕ್ಕೆ ಕಾರಣ ಏನು ಎಂದರೆ, ರಿಷಭ್ ನಗುತ್ತಲೇ “ಎಲ್ಲವೂ ಸಿನಿಮಾನೇ ಅಲ್ವಾ’ ಎಂದು ಉತ್ತರಿಸುತ್ತಾರೆ.
“ನನ್ನ ಪ್ರಕಾರ ಸಿನಿಮಾ ಅಂದರೆ ಸಿನಿಮಾ ಅಷ್ಟೇ. ಅದರಲ್ಲಿ ದೊಡ್ಡದು, ಚಿಕ್ಕದು ಎಂಬುದು ಮುಖ್ಯ ಅಲ್ಲ. ಅವೆಲ್ಲವೂ ನಾವು ನೋಡುವ ದೃಷ್ಟಿಕೋನದಲ್ಲಿ ಇರೋದು. ಜನ ಇಷ್ಟಪಟ್ಟು ಹಿಟ್ ಆದರೆ ಅದು ಯಶಸ್ವಿ ಚಿತ್ರ, ಕಾನ್ಸೆಪ್ಟ್ ಫೇಲ್ ಆದರೆ ಅದು ಫ್ಲಾಪ್ ಚಿತ್ರ ಅಷ್ಟೇ. ಪ್ರತಿಯೊಂದು ಸಿನಿಮಾಕ್ಕೂ ನಾವು ಶ್ರಮ ಹಾಕುತ್ತೇವೆ. ಈ ಸಿನಿಮಾಕ್ಕೆ “ಕಿರಿಕ್ ಪಾರ್ಟಿ’ಗಿಂತ ಜಾಸ್ತಿನೇ ಶ್ರಮ ಹಾಕಿದ್ದೇನೆ. ನನಗೆ ಅದೇ ಮಾಡಬೇಕು, ಸ್ಟಾರ್‌ಗಳದ್ದೇ ಮಾಡಬೇಕೆಂಬುದಿಲ್ಲ. ಏನಾದರೂ ಜನರಿಗೆ ಇಷ್ಟವಾಗುವ ಕಾನ್ಸೆಪ್ಟ್ ಅನ್ನು ವಿಭಿನ್ನವಾಗಿ ತೋರಿಸಬೇಕು ಎಂಬ ಆಸೆಯಿಂದ ಈ ಸಿನಿಮಾ ಮಾಡಿದ್ದೇನೆ’ ಎನ್ನುತ್ತಾರೆ ರಿಷಭ್.
ಸಿನಿಮಾದಿಂದ ಸಿನಿಮಾಕ್ಕೆ ಹೊಸ ಜಾನರ್ ಪ್ರಯತ್ನಿಸಬೇಕೆಂಬ ಆಸೆ ಅನೇಕ ನಿರ್ದೇಶಕರಿಗಿರುತ್ತದೆ. ರಿಷಭ್ ಕೂಡಾ ಅದೇ ಆಸೆಯೊಂದಿಗೆ “ಸರ್ಕಾರಿ ಶಾಲೆ’ಯನ್ನು ಕೈಗೆತ್ತಿಕೊಂಡಿದ್ದು. “ಬೇರೆ ಜಾನರ್ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಜೊತೆಗೊಂದು ಭಯವೂ ಇತ್ತು. ಆದರೆ, ಸದ್ಯ ಕನ್ನಡ ಪ್ರೇಕ್ಷಕರ ಮೈಂಡ್‌ಸೆಟ್ ಬದಲಾಗಿದೆ. ವಿಭಿನ್ನ ಕಾನ್ಸೆಪ್ಟ್ನ ಸಿನಿಮಾಗಳನ್ನು ಕೈಹಿಡಿಯುತ್ತಿದ್ದಾರೆ. ಆ ಧೈರ್ಯದೊಂದಿಗೆ ಈ ಸಿನಿಮಾವನ್ನು ಕೈಗೆತ್ತಿಕೊಂಡೆ’ ಎಂದು ಸಿನಿಮಾ ಆರಂಭಿಸಿದ ಬಗ್ಗೆ ಹೇಳುತ್ತಾರೆ. ಹಾಗಾದರೆ ಇದು ಕಲಾತ್ಮಕ ಚಿತ್ರನಾ ಅಥವಾ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾನಾ ಎಂಬ ಪ್ರಶ್ನೆ ಬರುತ್ತದೆ. “ಅವಾರ್ಡ್ ಬಂದರೆ ಕಲಾತ್ಮಕ, ಜನ ನೋಡಿ ಗೆದ್ದರೆ ಕಮರ್ಷಿಯಲ್’ ಎನ್ನುತ್ತಾ ನಗುತ್ತಾರೆ ರಿಷಭ್.
“ಜನರಿಗೆ ಇಷ್ಟವಾಗಬೇಕೆಂಬ ಉದ್ದೇಶದಿಂದಷ್ಟೇ ಈ ಸಿನಿಮಾ ಮಾಡಿದ್ದೇನೆ. ಅದನ್ನು ಆರ್ಟ್, ಕಮರ್ಷಿಯಲ್ ಎಂದು ವಿಂಗಡಿಸಲು ನನಗೆ ಇಷ್ಟವಿಲ್ಲ. ಒಂದು ಗಂಭೀರ ವಿಚಾರವನ್ನು ಮನರಂಜನೆಯ ಮೂಲಕ ಹೇಳುವುದು ನನ್ನ ಉದ್ದೇಶ. ಇಲ್ಲಿ ಯಾವುದೇ ಫಾರ್ಮುಲಾ ಇಟ್ಟುಕೊಂಡು ಸಿನಿಮಾ ಮಾಡಿಲ್ಲ. ಹೀರೋ ಇಂಟ್ರೋಡಕ್ಷನ್ ಆಗಬೇಕು, ಆತ ಫೈಟ್ ಮಾಡಬೇಕು, ಸೆಂಟಿಮೆಂಟ್ ಸೀನ್ ಬಳಿಕ ಕಾಮಿಡಿ ಬರಲೇಬೇಕು … ಈ ತರಹದ ಯಾವುದೇ ಕಟ್ಟುಪಾಡುಗಳಿಲ್ಲದೇ ಸಿನಿಮಾ ಮಾಡಿದ್ದೇನೆ’ ಎಂದು ತಮ್ಮ ಸಿನಿಮಾ ಶೈಲಿ ಬಗ್ಗೆ ಹೇಳುತ್ತಾರೆ.
“ಕಿರಿಕ್ ಪಾರ್ಟಿ’ಯ ಜ್ಯೂನಿಯರ್ ವರ್ಶನ್: ಬೇರೆ ಜಾನರ್ ಸಿನಿಮಾ ಮಾಡಬೇಕೆಂಬ ಆಸೆ ಓಕೆ. ಆದರೆ ಮಕ್ಕಳ ಸಿನಿಮಾನೇ ಮಾಡಬೇಕೆಂಬ ಕಲ್ಪನೆ ಹುಟ್ಟಿದ್ದು ಹೇಗೆ ಎಂದರೆ “ರಿಕ್ಕಿ’ ಸಿನಿಮಾದ ನೆನಪಿಗೆ ಜಾರುತ್ತಾರೆ ರಿಷಭ್. “ರಿಕ್ಕಿ’ ಸಿನಿಮಾ ಮಾಡುವಾಗ ಮಕ್ಕಳನ್ನಿಟ್ಟುಕೊಂಡು ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಿದ್ದರಂತೆ. ಆದರೆ, ಕಾರಣಾಂತರಗಳಿಂದ ಅದನ್ನು ಸಿನಿಮಾದಲ್ಲಿ ಸೇರಿಸಲು ಸಾಧ್ಯವಾಗಿರಲಿಲ್ಲವಂತೆ. ಆಗ ರಿಷಭ್‌ಗೆ ಬಂದ ಯೋಚನೆಯೇ ಮಕ್ಕಳ ಸಿನಿಮಾ. ಯಾಕೆ ಮಕ್ಕಳನ್ನಿಟ್ಟುಕೊಂಡು ಒಂದು ಮನರಂಜನಾತ್ಮಕ ಸಿನಿಮಾ ಮಾಡಬಾರದೆಂದು ಮನಸ್ಸಿನಲ್ಲೇ ಅಂದುಕೊಂಡರಂತೆ. ಅದಕ್ಕೆ ಸರಿಯಾಗಿ ಮುಂದಿನ ಸಿನಿಮಾ ಬಗ್ಗೆ ಚರ್ಚೆ ಮಾಡುವಾಗ, ಮಕ್ಕಳ ಸಿನಿಮಾವನ್ನೇ ಮಾಡಲು ನಿರ್ಧರಿಸಿದರಂತೆ ರಿಷಭ್. “”ರಿಕ್ಕಿ’ ಸಮಯದಲ್ಲಿ ಮಕ್ಕಳ ಸಿನಿಮಾ ಮಾಡುವ ಆಸೆ ಹುಟ್ಟಿತ್ತು. ಆದರೆ ಕಥೆ ಬಗ್ಗೆ ಆಲೋಚಿಸಿರಲಿಲ್ಲ. ಆದರೆ, “ಕಿರಿಕ್ ಪಾರ್ಟಿ’ ನಂತರ ಯಾವ ಸಿನಿಮಾ ಮಾಡೋದೆಂದು ಯೋಚಿಸುತ್ತಿರುವಾಗ ಮಕ್ಕಳ ಸಿನಿಮಾ ಮಾಡುವ ಬಗ್ಗೆ ನಿರ್ಧರಿಸಿದೆ. ಪ್ರಸ್ತುತ ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಮಕ್ಕಳಿಂದ ಹೇಳಿಸುವ ಪ್ರಯತ್ನವನ್ನು ಈ ಸಿನಿಮಾದಿಂದ ಮಾಡಿದ್ದೇನೆ. ಆರಂಭದಲ್ಲಿ ಕಥೆಯಷ್ಟೇ ಇತ್ತು. ಆದರೆ, ಯಾವ ಬ್ಯಾಕ್‌ಡ್ರಾಪ್‌ನಲ್ಲಿ ಮಾಡೋದೆಂಬ ಬಗ್ಗೆ ಆ ಐಡಿಯಾ ಇರಲಿಲ್ಲ. ಆ ನಂತರ ಕಾಸರಗೋಡು ಹಿನ್ನೆಲೆಯಲ್ಲಿ ಮಾಡಿದರೆ ಚೆಂದ ಎಂದು ನಿರ್ಧರಿಸಿ, ಅಲ್ಲಿನ ಕನ್ನಡದ ಸ್ಥಿತಿಗತಿ, ಶಾಲೆಗಳಲ್ಲಿ ಕನ್ನಡ ಹೇಗಿದೆ ಎಂಬ ಅಂಶವನ್ನು ಅಧ್ಯಯನ ಮಾಡಿ, ಆ ಲೊಕೇಶನ್ ಆಯ್ಕೆ ಮಾಡಿದೆ. ಈ ಕಥೆಯನ್ನು ಯಾವ ಊರಿನ ಹಿನ್ನೆಲೆಯಲ್ಲಾದರೂ ಮಾಡಬಹುದು. ಆದರೆ, ಕಾಸರಗೋಡು ಹೆಚ್ಚು ಸೂಕ್ತ ಅನಿಸಿತು. ಅದು ಕನ್ನಡದ ಅಳಿವು-ಉಳಿವಿನ ಹೋರಾಟದ ಜೊತೆಗೆ ಪರಿಸರದ ದೃಷ್ಟಿಯಿಂದಲೂ ತುಂಬಾ ಸುಂದರವಾಗಿದೆ. ಇಲ್ಲಿ ನಾನು ಹಳೆಯ ಅಂಶಗಳನ್ನು ಹೇಳಿಲ್ಲ. ಪ್ರಸ್ತುತ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿಯನ್ನಷ್ಟೇ ಹೇಳಿದ್ದೇನೆ. ಅದನ್ನು ಮಕ್ಕಳ ಮಾತಿನಲ್ಲಿ ಕಟ್ಟಿಕೊಟ್ಟಿದ್ದೇನೆ. ತುಂಬಾ ಮಜವಾಗಿದೆ. ಇದನ್ನು ನೀವು “ಕಿರಿಕ್ ಪಾರ್ಟಿ’ಯ ಜ್ಯೂನಿಯರ್ ವರ್ಶನ್ ಎಂದಾದರೂ ಕರೆಯಬಹುದು’ ಎಂದು ಕಥೆಯ ಬಗ್ಗೆ ಹೇಳುತ್ತಾರೆ ರಿಷಭ್.
“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ಹಿರಿಯ ನಟ ಅನಂತ್‌ನಾಗ್ ಬಿಟ್ಟರೆ ಮಿಕ್ಕಂತೆ ಮಕ್ಕಳೇ ನಟಿಸಿದ್ದಾರೆ. ಹಾಗಂತ ಅವರೊಂದಿಗೆ ಸಿನಿಮಾ ಮಾಡಿದ್ದು ರಿಷಭ್‌ಗೆ ದೊಡ್ಡ ವ್ಯತ್ಯಾಸ ಅನಿಸಲಿಲ್ಲವಂತೆ. “ಅನಂತ್‌ನಾಗ್ ಅವರು ತುಂಬಾ ಸ್ಟ್ರಿಕ್ಟ್. ಪ್ರೊಫೆಶನಲ್ ಆಗಿಲ್ಲದಿದ್ದರೆ ಸಿಟ್ಟಾಗುತ್ತಾರೆಂದು ಕೇಳಿದ್ದೆ. ಅದೊಂದು ಭಯವಿತ್ತು. ಆದರೆ ಅವರ ಬಳಿ ಹೋಗಿ ಕಥೆ ಹೇಳುತ್ತಿದ್ದಂತೆ ಅವರು ಖುಷಿಯಿಂದ ಒಪ್ಪಿಕೊಂಡರು. ಈ ಕಥೆಗೂ ಅವರಿಗೂ ಒಂದು ಭಾವನಾತ್ಮಕ ಸಂಬಂಧವಿತ್ತು. ಏಕೆಂದರೆ ಅನಂತ್‌ನಾಗ್ ಕೂಡ ಕಾಸರಗೋಡು ಭಾಗದಲ್ಲಿ ಬೆಳೆದಿದ್ದಾರೆ, ಅಲ್ಲಿನ ಆನಂದಾಶ್ರಮದಲ್ಲಿದ್ದವರು. ಹಾಗಾಗಿ, ಅವರು ಖುಷಿಯಿಂದ ಈ ಸಿನಿಮಾದಲ್ಲಿ ತೊಡಗಿಕೊಂಡರು. ಇನ್ನು ಚಿತ್ರದಲ್ಲಿ ನಟಿಸಿದ ಮಕ್ಕಳಿಗೆ 30 ರಿಂದ 40 ದಿನ ರಿಹರ್ಸಲ್ ಮಾಡಿಸಿದ್ದೆವು. ಹಾಗಾಗಿ, ಪ್ರತಿಯೊಬ್ಬರಿಗೂ ಸ್ಕ್ರಿಪ್ಟ್ ಬಗ್ಗೆ ಗೊತ್ತಿತ್ತು. ಇಡೀ ಸಿನಿಮಾದಲ್ಲಿ ನನಗೆ ನಾನೇ ಚಾಲೆಂಜ್ ಆಗಿದ್ದೆ. ಯಾವ ತರಹ ಸಿನಿಮಾವನ್ನು ಹೊಸದಾಗಿ ಕಟ್ಟಿಕೊಡಬೇಕು, ಫ್ರೆಶ್ ಎನಿಸುವ ದೃಶ್ಯವನ್ನು ಕಟ್ಟಿಕೊಡಬೇಕಾದ ಸವಾಲು ನನಗಿತ್ತು’ ಎನ್ನುತಾರೆ ರಿಷಭ್ ಶೆಟ್ಟಿ.
ಸದ್ಯ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ತಿಂಗಳಲ್ಲೇ ತೆರೆಕಾಣುತ್ತಿದೆ. ಅಂದಹಾಗೆ, ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ರಿಷಭ್ ಅವರದ್ದೇ.
ರವಿ ಪ್ರ ಕಾಶ್ ರೈ