Advertisement

ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಸರಕಾರಿ ಯೋಜನೆಗಳ ಮಾಹಿತಿ

04:30 AM Nov 23, 2018 | Team Udayavani |

ಮಹಾನಗರ: ಸರಕಾರಿ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಮಂದಿಗೆ ಸಮರ್ಪಕವಾಗಿ ತಲುಪಬೇಕು. ಜತೆಗೆ ಪ್ಲಾಸ್ಟಿಕ್‌ ಜಾಹಿರಾತು ಫಲಕಗಳ ಬಳಕೆ ಕಡಿಮೆಯಾಗಬೇಕು ಎಂಬ ಉದ್ದೇಶದಿಂದ ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳ ಒಳಗೆ ನೂತನಾಗಿ ಎಲ್‌ಇಡಿ ಟಿವಿಗಳನ್ನು ಅಳವಡಿಸಿ ಮಾಹಿತಿ ನೀಡುವ ವಿನೂತನ ಪ್ರಯತ್ನಕ್ಕೆ ನಗರದಲ್ಲಿ ಸಂಚರಿಸುವ ಕೆಲವೊಂದು ಖಾಸಗಿ ಸಿಟಿ ಬಸ್‌ ಮಾಲಕರು ಮುಂದಾಗಿದ್ದಾರೆ. ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ಜಾಹಿರಾತು ಫಲಕಗಳ ಹಾವಳಿ ಹೆಚ್ಚಾಗುತ್ತಿದೆ. ಸರಕಾರದ ನಿಯಂತ್ರಣವಿದ್ದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಜಾಹಿರಾತು ಕೂಡ ಡಿಜಿಟಲೀಕರಣಗೊಂಡರೆ ಪ್ಲಾಸ್ಟಿಕ್‌ ಬಳಕೆ ನಿಯಂತ್ರಿಸಬಹುದು ಎಂಬ ಉದ್ದೇಶವೂ ಈ ಯೋಜನೆಯದ್ದು. ಸದ್ಯ ನಗರದಲ್ಲಿ ಸಂಚರಿಸುವ ಏಳು ಸಿಟಿ ಬಸ್‌ಗಳಲ್ಲಿ ಎಲ್‌ಇಡಿ ಟಿವಿ ಅಳವಡಿಸಲಾಗಿದೆ.

Advertisement

ಅಂದಹಾಗೆ, ಈ ಟಿವಿಗಳಲ್ಲಿ ಸಿನೆಮಾಗಳಿಗೆ ಸಂಬಂಧಿಸಿದ ವಿಡಿಯೋಗಳು, ಹಾಡುಗಳು ಪ್ರಸಾರವಾಗುವುದಿಲ್ಲ. ಬದಲಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ತುಣುಕು ಭಿತ್ತರವಾಗುತ್ತದೆ. ಮುಖ್ಯವಾಗಿ ರಾಜ್ಯ, ಕೇಂದ್ರ ಸರಕಾರಗಳ ವಿನೂತನ ಯೋಜನೆಗಳು, ದಕ್ಷಿಣ ಕನ್ನಡ ಜಿಲ್ಲೆಯ ಸೌಂದರ್ಯ, ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ, ಸ್ವತ್ಛ ಪರಿಸರಕ್ಕೆ ಸಂಬಂಧಿತ ವಿಡಿಯೋಗಳು, ಸೇನೆಗೆ ಸೇರಲು ಬಯಸುವವರಿಗೆ ಮಾಹಿತಿ, ರಸ್ತೆ ಸುರಕ್ಷತಾ ಮಾಹಿತಿಗಳು, ಮತದಾನದ ಅರಿವು ಸಹಿತ ಜಾಹಿರಾತುಗಳನ್ನು ಕೂಡ ಪ್ರಸಾರ ಮಾಡಲು ತೀರ್ಮಾನಿಸಲಾಗಿದೆ.

ಮತ್ತಷ್ಟು ಬಸ್‌ಗಳಲ್ಲಿ ಅಳವಡಿಕೆ
ಪ್ರಾಯೋಗಿಕ ಉದ್ದೇಶದಿಂದ ಸದ್ಯ ಕೇವಲ ಏಳು ಸಿಟಿ ಬಸ್‌ಗಳಲ್ಲಿ ಈಗಾಗಲೇ ನೂತನ ವ್ಯವಸ್ಥೆ ಅಳವಡಿಸಿದರೂ ಡಿಸೆಂಬರ್‌ ತಿಂಗಳ ಅಂತ್ಯಕ್ಕೆ ಸುಮಾರು 25 ಬಸ್‌ಗಳಲ್ಲಿ ಪರಿಚಯಿಸಲು ಚಿಂತನೆ ನಡೆಸಲಾಗುತ್ತಿದೆ. 
ತೀರಾ ಗ್ರಾಮೀಣ ಪ್ರದೇಶಕ್ಕೆ ತೆರಳು ವಂತಹ ಬಸ್‌ಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ, ಬಳಿಕ ಸಿಟಿಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಎಲ್‌ಇಡಿ ಟಿವಿ ಅಳವಡಿಸುವ ಯೋಜನೆಯಲ್ಲಿದೆ. 

ಏಳು ಸಿಟಿ ಬಸ್‌ಗಳಲ್ಲಿ ಅಳವಡಿಕೆ
ಪ್ರಯಾಣಿಕರಿಗೆ ಮಾಹಿತಿ ನೀಡುವಂತಹ ಎಲ್‌ಇಡಿ ಟಿವಿಯನ್ನು ಮೊದಲನೇ ಹಂತವಾಗಿ ಸ್ಟೇಟ್‌ಬ್ಯಾಂಕ್‌ನಿಂದ ಮಂಗಳಾದೇವಿ, ಬೋಂದೆಲ್‌, ಉಳ್ಳಾಲ, ತಲಪ್ಪಾಡಿ, ಕೊಣಾಜೆ-2 ಬಸ್‌, ಶಕ್ತಿನಗರ ಜತೆಗೆಮಂಗಳೂರು-ಬಿ.ಸಿ.ರೋಡು-ವಿಟ್ಲಕ್ಕೆ ತೆರಳುವ ಬಸ್‌, ಮಂಗಳೂರು-ಉಡುಪಿ ಎಕ್ಸ್‌ಪ್ರೆಸ್‌ ಬಸ್‌ಗಳಲ್ಲಿ ಅಳವಡಿಸಲಾಗಿದೆ. 

ಅರಿವು ಮೂಡಿಸುವ ಉದ್ದೇಶ
ಗ್ರಾಮೀಣ ಪ್ರದೇಶದ ಮಂದಿಗೆ ಸರಕಾರಿ ಯೋಜನೆಗಳ ಬಗ್ಗೆ ಹೆಚ್ಚಾಗಿ ಮಾಹಿತಿ ಇರುವುದಿಲ್ಲ. ಅವುಗಳ ಅರಿವು ಮೂಡಿಸುವ ಸಲುವಾಗಿ ಸದ್ಯ ಏಳು ಬಸ್‌ಗಳಲ್ಲಿ ಈಯೋಜನೆ ಹಮ್ಮಿಕೊಂಡಿದ್ದೇವೆ.
– ದಿಲ್‌ರಾಜ್‌ ಆಳ್ವ, ಖಾಸಗಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ

Advertisement

— ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next