Advertisement

ಜಾತ್ರೆ, ಉತ್ಸವಗಳಿಗೆ ಸರಕಾರ ಅನುಮತಿ : ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ

01:51 AM Feb 10, 2021 | Team Udayavani |

ಬೆಂಗಳೂರು: ದೇವಸ್ಥಾನಗಳಲ್ಲಿ ಈ ಹಿಂದಿನಂತೆಯೇ ಎಲ್ಲ ಧಾರ್ಮಿಕ ವಿಧಿ ವಿಧಾನ ಪಾಲನೆ, ಜಾತ್ರೆ ಮತ್ತು ರಥೋತ್ಸವಗಳನ್ನು ಆಚರಿಸಲು ಸಂಪೂರ್ಣ ಅನುಮತಿ ನೀಡಿ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಕೊರೊನಾ ಮುಂಜಾಗ್ರತೆಯ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ದೈನಂದಿನ ಮತ್ತು ಸೀಮಿತ ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶವಿತ್ತು. ಇದರಿಂದ ದೇವ ಸ್ಥಾನಗಳಲ್ಲಿ ಬಹುತೇಕ ವಿಶೇಷ ಪೂಜೆ ಕಾರ್ಯಕ್ರಮಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ಪ್ರತೀ ವರ್ಷ ಫೆಬ್ರವರಿಯಲ್ಲಿ ರಾಜ್ಯದ ಹಲವು ದೇವಸ್ಥಾನಗಳಲ್ಲಿ ಜಾತ್ರೆ ಮತ್ತು ರಥೋತ್ಸವಗಳು ನಡೆಯಲಿದ್ದು, ಈ ವರ್ಷವೂ ಅವಕಾಶ ನೀಡುವಂತೆ ಭಕ್ತರಿಂದ ಬೇಡಿಕೆ ಬಂದಿದೆ. ಕೊರೊನಾ ಮುಂಜಾಗ್ರತೆ ಕ್ರಮಗಳೊಂದಿಗೆ ದೇವಸ್ಥಾನಗಳಲ್ಲಿ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಎಲ್ಲ ಸೇವೆಗಳು, ಜಾತ್ರೆಗಳು, ರಥೋತ್ಸವ, ಪವಿತ್ರೋತ್ಸವ, ವಿಶೇಷ ಉತ್ಸವ, ಅನ್ನದಾಸೋಹ, ಪ್ರಸಾದ ವಿತರಣೆ ಸಹಿತ ಇತರ ಪೂಜಾ ಕೈಂಕರ್ಯಗಳನ್ನು ನಡೆಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಸತಿ ನಿಲಯಗಳಿಗೂ ಅವಕಾಶ
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಸ್ಥಾನಗಳ ವಸತಿ ನಿಲಯಗಳನ್ನು ಮುಚ್ಚಲಾಗಿತ್ತು. ಸದ್ಯ ಅವುಗಳನ್ನು ಮುಂಜಾಗ್ರತೆ ಪಾಲಿಸಿ ಭಕ್ತರಿಗೆ ಒದಗಿಸಬಹುದಾಗಿದೆ.

ಬೇಡಿಕೆಗೆ ಮಣಿದ ಸರಕಾರ
ಕೊರೊನಾ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ಬಹುತೇಕ ಚಟುವಟಿಕೆಗಳು ಈಗಾಗಲೇ ಆರಂಭವಾಗಿವೆ. ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಸೀಟ್‌ ಭರ್ತಿಗೆ ಅನುಮತಿ ನೀಡಿತ್ತು. ಆದರೆ ದೇವಸ್ಥಾನಗಳಲ್ಲಿ ಸೇವೆ, ಜಾತ್ರೆಗಳಿಗೆ ಅವಕಾಶ ನೀಡದಿರುವ ಕುರಿತು ಭಕ್ತರು ಬೇಸರ ವ್ಯಕ್ತಪಡಿಸಿದ್ದರು. ಕೊನೆಗೂ ಸರಕಾರವು ಭಕ್ತರ ಭಾವನೆಗಳಿಗೆ ಮಣಿದಿದೆ.

Advertisement

ಆದಾಯ ಏರಿಕೆಗೆ ಅವಕಾಶ
ಸೀಮಿತ ಭಕ್ತರಿಗೆ ಅವಕಾಶ, ಕಠಿನ ಮಾರ್ಗಸೂಚಿ, ಸೇವೆಗಳಿಗೆ ಅವಕಾಶ ಇಲ್ಲ ಎಂಬ ಕಾರಣದಿಂದಾಗಿ ದೇವಸ್ಥಾನಗಳಲ್ಲಿ ಭಕ್ತರ ಪ್ರಮಾಣ ಕಡಿಮೆಯಾಗಿತ್ತು. ಇದರಿಂದ ಧಾರ್ಮಿಕ ಇಲಾಖೆ ದೇವಸ್ಥಾನಗಳ ಆದಾಯವು ಕುಸಿದಿತ್ತು. ಸದ್ಯ ಪೂರ್ಣ ಅನುಮತಿಯಿಂದ ಆದಾಯ ಏರಿಕೆಯಾಗಲಿದೆ. ಭಕ್ತರ ಧಾರ್ಮಿಕ ಪ್ರವಾಸಗಳು ಹೆಚ್ಚಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next