Advertisement

ಗ್ರಾಪಂ ನೌಕರರ ಬೇಡಿಕೆಗೆ ಸರ್ಕಾರದ ಸ್ಪಂದನೆ

12:33 PM Aug 29, 2018 | |

ಬೆಂಗಳೂರು: ನಾನಾ ಕಾರಣಕ್ಕೆ ಕೈಬಿಡಲು ಉದ್ದೇಶಿಸಿದ್ದ 18,000 ಗ್ರಾಪಂ ನೌಕರರ ಮುಂದುವರಿಕೆ ಸೇರಿದಂತೆ ಗ್ರಾಪಂ ನೌಕರರಿಗೆ ಪಿಂಚಣಿ, ವೈದ್ಯಕೀಯ ವೆಚ್ಚ ಹಾಗೂ ಗ್ರಾಚ್ಯುಟಿ ಸೌಲಭ್ಯಕ್ಕೆ ಒತ್ತಾಯಿಸಿ ಸಾವಿರಾರು ನೌಕರರು ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಅನಿರ್ದಿಷ್ಟಾವಧಿ ಹೋರಾಟಕ್ಕಿಳಿದಿದ್ದ  ನೌಕರರ ಮನವಿಗೆ ಸ್ಪಂದಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಅವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂಜೆ ಹೊತ್ತಿಗೆ ಹೋರಾಟ ಅಂತ್ಯಗೊಂಡಿತು. ಬೆಳಗ್ಗೆ ನಗರ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದ ಗ್ರಾಮ ಪಂಚಾಯತ್‌ ನೌಕರರು ಬಳಿಕ ಕಾಳಿದಾಸ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಿ.ಜಿ.ಕೆ.ನಾಯರ್‌ ಮಾತನಾಡಿ, ಪ್ರತಿ ಕಾರ್ಮಿಕರ ದುಡಿಮೆಗೂ ಮಾಲೀಕರು ಸೂಕ್ತ ವೇತನ ನೀಡಬೇಕು. ದುಡಿಮೆ ಮಾಡಿಸಿಕೊಂಡು ವೇತನ ನೀಡದಿದ್ದರೆ ಅಂತಹ ಮಾಲೀಕರನ್ನು ಜೈಲಿಗೆ ಕಳುಹಿಸಬಹುದು. ಆದರೆ ಹತ್ತಾರು ವರ್ಷಗಳಿಂದ ಗ್ರಾಪಂ ನೌಕರರು ಕಾರ್ಯ ನಿರ್ವಹಿಸದಿದ್ದರೂ ಸರ್ಕಾರ ಅವರಿಗೆ ಸರಿಯಾಗಿ ವೇತನ ನೀಡದಿರುವುದು ಖಂಡನೀಯ ಎಂದು ಹೇಳಿದರು.

ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ರಾಜ್ಯದಲ್ಲಿ 61,000 ಗ್ರಾಪಂ ನೌಕರರಿದ್ದಾರೆ. ಇದರಲ್ಲಿ ಜನ್ಮ ದಿನಾಂಕದ ಮಾಹಿತಿ ಕೊರತೆ ಸೇರಿದಂತೆ ಇತರೆ ಕಾರಣಕ್ಕೆ ಹತ್ತಾರು ವರ್ಷ ಸೇವೆ ಸಲ್ಲಿಸಿದ 18,000 ಮಂದಿಗೆ ನೌಕರಿಯೇ ಕೈತಪ್ಪುವ ಆತಂಕ ಎದುರಾಗಿದೆ. ಹಾಗಾಗಿ ನೌಕರರ ಎಲ್ಲ ಬೇಡಿಕೆ ಈಡೇರಿಸುವವರೆಗೆ ಹೋರಾಟ ಮುಂದುವರಿಸಬೇಕು ಎಂದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಎಲೆಕ್ಟ್ರಾನಿಕ್‌ ಫ‌ಂಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (ಇಎಫ್ಎಂಎಸ್‌) ಮೂಲಕವೇ ಗ್ರಾಪಂ ಕಾರ್ಮಿಕರಿಗೆ ವೇತನ ನೀಡಬೇಕು. ಸಾಂಕೇತಿಕ ಧರಣಿಗೆ ಬದಲಿಗೆ ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರಿಸಬೇಕು. ಈ ಹಿಂದೆ ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ನಡೆಸಿದ ಹೋರಾಟವನ್ನು ಅನುಸರಿಸಬೇಕು ಎಂದು ಹೇಳಿದರು.

Advertisement

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ರಾಜ್ಯದಲ್ಲಿರುವ ಮೈತ್ರಿ ಸರ್ಕಾರವು ಜನವಿರೋಧಿ, ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿವೆ. ಕೇವಲ ಬಂಡವಾಳಶಾಹಿಗಳು, ಕಾರ್ಪೊರೇಟ್‌ ಕಂಪೆನಿಗಳ ಪರವಾಗಿ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರ ಸ್ಪಂದಿಸುವವರೆಗೆ ಬೆಂಗಳೂರು ಬಿಟ್ಟು ಕದಲಬಾರದು ಎಂದು ಕರೆ ನೀಡಿದರು. ಸ್ಥಳಕ್ಕೆ ಬಂದ ಪಂಚಾಯತ್‌ರಾಜ್‌ ಇಲಾಖೆ ನಿರ್ದೇಶಕ ಕೆಂಪೇಗೌಡ ಮನವಿ ಸ್ವೀಕರಿಸಿದರು.

ಸಚಿವರ ಸ್ಪಂದನೆ: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿತ್ತು. ಸಂಜೆ ವೇಳೆಗೆ ಅಧಿಕಾರಿಗಳು ಸಭೆಗೆ ಆಹ್ವಾನಿಸಿದರು. ನಂತರ ನಡೆದ ಸಭೆಯಲ್ಲಿ ಸಚಿವರು ಎಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಪ್ರತಿಭಟನಾ ಸ್ಥಳಕ್ಕೆ ಬಂದು ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ ಬಳಿಕ ಹೋರಾಟ ಅಂತ್ಯಗೊಳಿಸಲಾಯಿತು ಎಂದು ಮಾರುತಿ ಮಾನ್ಪಡೆ ತಿಳಿಸಿದರು.

ಮುಖ್ಯವಾಗಿ ಜನ್ಮ ದಿನಾಂಕ ಸೇರಿದಂತೆ ಇತರೆ ಕಾರಣಕ್ಕೆ ಕೈಬಿಡಲು ಉದ್ದೇಶಿಸಿದ್ದ 18,000 ಗ್ರಾಪಂ ನೌಕರರನ್ನು ಸೇವೆಯಲ್ಲೇ ಮುಂದುವರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. 2014ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತೀರ್ಣರಾಗಿ 10 ವರ್ಷ ಸೇವೆ ಸಲ್ಲಿಸಿದರು ಹಾಗೂ 2014ರ ನಂತರ ಪಿಯುಸಿ ಉತ್ತೀರ್ಣರಾಗಿ 10 ವರ್ಷ ಪೂರ್ಣಗೊಳಿಸಿದ ಕರ ವಸೂಲಿಗಾರರಿಗೆ ಗ್ರೇಡ್‌- 2 ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಲು ಒಪ್ಪಿದ್ದಾರೆ. ಜತೆಗೆ ಗ್ರಾಪಂ ನೌಕರರಿಗೆ ಪಿಂಚಣಿ, ವೈದ್ಯಕೀಯ ವೆಚ್ಚ ಹಾಗೂ ಗ್ರಾಚ್ಯುಟಿ ನೀಡಲು ಒಪ್ಪಿದ್ದಾರೆ. ವಾರದಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next