ಬೆಂಗಳೂರು: ರಾಜ್ಯದ ಎಲ್ಲ ಕಾರಾಗೃಹಗಳಲ್ಲಿರುವ ಸಜಾಕೈದಿಗಳನ್ನು ನಾಲ್ಕು ವರ್ಗಗಳನ್ನಾಗಿ ವಿಂಗಡಿಸಿ, ಅವರ ಕೂಲಿ ದರವನ್ನು 175 ರೂ.ನಿಂದ 250 ರೂ.ವರೆಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇತ್ತೀಚೆಗೆ ಕಾರಾಗೃಹ ಇಲಾಖೆಯ ಮುಖ್ಯಸ್ಥರು ಎಲ್ಲಾ ಸಜಾಕೈದಿಗಳ ಕೂಲಿ ದರ ಹೆಚ್ಚಿಸಲು ಮನವಿ ಮಾಡಿದ್ದರು. ಈ ಸಂಬಂಧ ಕಾರ್ಮಿಕ ಇಲಾಖೆ ಆಯುಕ್ತರು, ಗೃಹ ಇಲಾಖೆಯ ಅಪರ ಕಾರ್ಯದರ್ಶಿ, ಆರ್ಥಿಕ ಇಲಾಖೆಯ ವಿಶೇಷಾಧಿಕಾರಿ, ಸರ್ಕಾರದ ಉಪ ಕಾರ್ಯದರ್ಶಿ(ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ), ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರೀಕ್ಷಕರು ಹಾಗೂ ಬೆಂಗಳೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರನ್ನೊಳಗೊಂಡ ಮಂಡಳಿ ಮಾಡಿದ್ದ ಶಿಫಾರಸಿನಂತೆ ಕೂಲಿ ದರ ಹೆಚ್ಚಿಸಲಾಗಿದೆ.
ಈ ಮೊದಲು ಸಜಾ ಕೈದಿಗಳನ್ನು ತರಬೇತಿ ಕೆಲಸಗಾರ ಬಂಧಿ, ಕುಶಲ ಬಂಧಿ ಹಾಗೂ ಹೆಚ್ಚಿನ ಕುಶಲ ಬಂಧಿಗಳು ಎಂದು ವಿಂಗಡಿಸಲಾಗಿತ್ತು. ಆದರೆ, ಮಂಡಳಿಯ ಶಿಫಾರಸಿನಂತೆ ಅಕುಶಲ(ತರಬೇತಿ ಕೆಲಸಗಾರ ಬಂಧಿ), ಅರೆಕುಶಲ, ಕುಶಲ ಮತ್ತು ಅತೀ ಕುಶಲ ಎಂದು ನಾಲ್ಕು ವರ್ಗಗಳನ್ನಾಗಿ ವಿಂಗಡಿಸಲಾಗಿದ್ದು, ಆಹಾರ ಮತ್ತು ಬಟ್ಟೆಯ ವೆಚ್ಚದ ಮೊತ್ತ ಕಡಿತಗೊಳಿಸಿ ಇನ್ನುಳಿದ ಹಣವನ್ನು ಕೈದಿಯ ಖಾತೆಗೆ ಜಮೆ ಮಾಡಲಾಗುತ್ತದೆ. ಮಹಿಳೆ ಮತ್ತು ಪುರುಷ ಎಂಬ ಯಾವುದೇ ಬೇಧವಿಲ್ಲದೇ ಕೂಲಿ ದರ ನಿಗದಿ ಪಡಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಸಜಾ ಕೈದಿ ಮಾಡುವ 8 ಗಂಟೆಗಳ ಕೆಲಸಕ್ಕೆ ಕೂಲಿ ದರ ನಿಗದಿ ಪಡಿಸಲಾಗಿದೆ. ತರಬೇತಿ ಕೆಲಸಗಾರ ಬಂಧಿ ಕನಿಷ್ಠ ಒಂದು ವರ್ಷ ತರಬೇತಿ ಪಡೆದ ನಂತರ ಅರೆಕುಶಲ ಕೆಲಸಗಾರ ಬಂಧಿಗೆ ಬಡ್ತಿ ಪಡೆಯುತ್ತಾನೆ. ಇಲ್ಲಿ ಎರಡು ವರ್ಷ ಪೂರ್ಣಗೊಳಿಸಿದ ಬಳಿಕ ಕುಶಲ ಬಂಧಿಯಾಗಿ ಮುಂಬಡ್ತಿ ಪಡೆದು, ಅಲ್ಲಿ ಕನಿಷ್ಠ ಮೂರು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಹೆಚ್ಚಿನ ಕುಶಲ ಬಂಧಿಯಾಗಿ ಗುರುತಿಸಿಕೊಳ್ಳುತ್ತಾನೆ. ಕೈದಿಯ ತಾಂತ್ರಿಕ ವಿದ್ಯಾರ್ಹತೆ, ಅನುಭವ ಹಾಗೂ ಬಂಧಿಯ ಸನ್ನಡತೆ ನಡವಳಿಕೆ ಆಧರಿಸಿ ಮುಂಬಡ್ತಿ ನೀಡಲಾಗುತ್ತದೆ. ಈ ಪ್ರಕ್ರಿಯೆ ಪ್ರತಿ ಹಂತದ ಬಡ್ತಿಯಲ್ಲೂ ಪರಿಗಣನೆಯಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.