ಮಲ್ಪೆ: ಬಿಲ್ಲವರು ಎಲ್ಲರೊಂದಿಗೆ ಬೆರೆತು ನ್ಯಾಯ ನೀತಿಯೊಂದಿಗೆ ಶ್ರಮಜೀವಿಗಳಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಂಡವರು ಎಂದು ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಇದರ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಹೇಳಿದರು.
ಅವರು ಫೆ.12ರಂದು ಅಂಬಲಪಾಡಿ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಶ್ರೀ ವಿಠೊಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ ಅಂಬಲಪಾಡಿ ಇದರ ಭಜನಾ ಸಪ್ರಾಹ, 59ನೇ ವಾರ್ಷಿಕ ಮಂಗಲೋತ್ಸವ, ಪ್ರತಿಷ್ಠಾ ವರ್ಧಂತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರಸಕ್ತ ಸಾಮಾಜಿಕ ವಿದ್ಯಮಾನಗಳಿಗೆ ಅನುಗುಣವಾಗಿ ಬಿಲ್ಲವ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರಕಾರದ ಸವಲತ್ತು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಬಿಲ್ಲವ ಮಹಾ ಸಮಾವೇಶದಲ್ಲಿ ಸಲ್ಲಿಸಿರುವ ಪ್ರಮುಖ ಬೇಡಿಕೆಗಳನ್ನು ಸರಕಾರ ಪುರಸ್ಕರಿಸುವ ವಿಶ್ವಾಸವಿದೆ ಎಂದರು.
ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಅಧ್ಯಕ್ಷತೆ ವಹಿಸಿ, ಭಜನೆ ಭಗವಂತನ ಜತೆಗೆ ನೇರ ಸಂಪರ್ಕ ಹೊಂದಲು ಇರುವ ಸುಲಭ ಸಾಧನ. ಶ್ರದ್ಧಾ ಭಕ್ತಿ ಭಾವದ ಭಜನೆಗೆ ಭಗವಂತನು ಒಲಿಯುತ್ತಾನೆ.
ಮಂಗಲೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಗವರ್ನರ್ ಲಯನ್ ಡಾ| ತಲ್ಲೂರು ಶಿವರಾಮ ಶೆಟ್ಟಿ ಮತ್ತು ಕಾರ್ತಿಕ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಹರಿಯಪ್ಪ ಕೋಟ್ಯಾನ್ ಬಹುಮಾನ ವಿತರಿಸಿದರು. ಸಂಘದ ಮಹಿಳಾ ಘಟಕದ ಸಂಚಾಲಕಿ ವಿಜಯ ಜಿ. ಬಂಗೇರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ
ಕೃಷ್ಣ ಕೋಟ್ಯಾನ್ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಎ. ಶಿವಕುಮಾರ್ ಅಂಬಲಪಾಡಿ ನಿರೂಪಿಸಿ, ಕೋಶಾಧಿಕಾರಿ ದಯಾನಂದ ಎ. ವಂದಿಸಿದರು.