Advertisement

ಖಾಸಗಿ ಪರಿಣಿತರಿಗೆ ಸರ್ಕಾರಿ ಹುದ್ದೆ

06:00 AM Jun 11, 2018 | Team Udayavani |

ನವದೆಹಲಿ: ಸಾಮಾನ್ಯವಾಗಿ ಹಿರಿಯ ಐಎಎಸ್‌ ಅಧಿಕಾರಿಗಳನ್ನೇ ನೇಮಕ ಮಾಡುವ ಜಂಟಿ ಕಾರ್ಯದರ್ಶಿ ಹುದ್ದೆಗೆ ಖಾಸಗಿ ಕ್ಷೇತ್ರದ ಪರಿಣಿತರನ್ನು ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisement

10 ಹುದ್ದೆಗಳನ್ನು ಈ ಲ್ಯಾಟರಲ್‌ ಸ್ಕೀಮ್‌ ಅಡಿಯಲ್ಲಿ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ನಾಗರಿಕ ವಿಮಾನಯಾನ, ವಾಣಿಜ್ಯ, ಆರ್ಥಿಕ ವ್ಯವಹಾರಸಹಿತ 10 ಕ್ಷೇತ್ರಗಳಲ್ಲಿ ಯಾವುದಾದರೂ ಒಂದರಲ್ಲಿ ಪರಿಣತಿ ಹೊಂದಿರಬೇಕು.

ಇವರನ್ನು ಮೊದಲು 3 ವರ್ಷಗಳಿಗೆ ನೇಮಕ ಮಾಡಲಾಗುತ್ತದೆ ಮತ್ತು ನಂತರ 5 ವರ್ಷಗಳಿಗೆ ಸೇವೆ ವಿಸ್ತರಿಸಬಹುದಾಗಿದೆ. ಮಾಸಿಕ 1.44 ಲಕ್ಷ ರೂ.ಯಿಂದ 2.18 ಲಕ್ಷ ರೂ. ಸಂಬಳ ಹಾಗೂ ಇತರ ಭತ್ಯೆಗಳು ಸಿಗುತ್ತವೆ.

ಯಾಕೆ ಹೊರಗಿನವರು?: ಖಾಸಗಿಯವರನ್ನು ಜಂಟಿ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆಗೆ ನೇಮಕ ಮಾಡುವ ಶಿಫಾರಸು ಮಾಡಿದ್ದು ನೀತಿ ಆಯೋಗ.

ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಚುರುಕು ನೀಡುವುದಕ್ಕೆ ಅತ್ಯಂತ ಅಗತ್ಯದ್ದು ಎಂದು ನೀತಿ ಆಯೋಗ ಶಿಫಾರಸು ಮಾಡಿತ್ತು. ಈ ಹಿಂದೆ ಕೆಲವು ಹುದ್ದೆಗಳಿಗೆ ಅಧಿಕಾರಿಗಳನ್ನು ಹೊರತುಪಡಿಸಿ ಇತರರನ್ನು ನೇಮಕ ಮಾಡಲಾಗಿತ್ತು. ಆಯುರ್ವೇದ ವೈದ್ಯ ರಾಜೇಶ್‌ ಕೊಟೇಚರನ್ನು ಆಯುಷ್‌ ಸಚಿವಾಲಯದ ವಿಶೇಷ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಪ್ರಸಾರ ಭಾರತಿ ಸಿಇಒ ಆಗಿ ಶಶಿಶೇಖರ ವೆಂಪತಿಯವರನ್ನೂ ನೇಮಿಸಲಾಗಿದೆ.

Advertisement

ಯಾರು ಅರ್ಜಿ ಸಲ್ಲಿಸಬಹುದು?: ಖಾಸಗಿ ಕಂಪನಿಗಳು, ಕನ್ಸಲ್ಟನ್ಸಿ ಸಂಸ್ಥೆಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಸ್ವಾಯತ್ತ ಮಂಡಳಿಗಳು, ಶಾಸನಾತ್ಮಕ ಸಂಘಟನೆಗಳು, ವಿಶ್ವವಿದ್ಯಾಲಯಗಳು, ಸಂಶೋಧನೆ ಸಂಸ್ಥೆಗಳಲ್ಲಿ 15 ವರ್ಷ ಅನುಭವ ಇರುವವರು ಮತ್ತು ಸಮಾನ ಹುದ್ದೆಗಳಲ್ಲಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು 40 ವರ್ಷ ಮೇಲ್ಪಟ್ಟವರು ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದೆ.

ಆನ್‌ಲೈನ್‌ನಲ್ಲಿ ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 30 ಕೊನೆಯ ದಿನವಾಗಿದೆ. ಶಾರ್ಟ್‌ಲಿಸ್ಟ್‌ ಮಾಡಿದ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯು ಸಂದರ್ಶನಕ್ಕೆ ಕರೆಯುತ್ತದೆ.

ಅರ್ಜಿ ಆಹ್ವಾನಿಸಲಾದ ಹುದ್ದೆಗಳು: 1. ಕಂದಾಯ ಇಲಾಖೆ, 2. ಹಣಕಾಸು ಸೇವೆಗಳು, 3. ವಾಣಿಜ್ಯ ವಹಿವಾಟು, 4. ಕೃಷಿ ಮತ್ತು ಕೃಷಿಕರ ಕಲ್ಯಾಣ, 5. ರಸ್ತೆ ಸಾರಿಗೆ ಮತ್ತು ಹೆದ್ದಾರಿ, 6. ಬಂದರು ಸಚಿವಾಲಯ, 7.ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ, 8.ನವೀನ ಮತ್ತು ನವೀಕರಿಸಬಹುದಾದ ಇಂಧನ, 9. ನಾಗರಿಕ ವಿಮಾನಯಾನ, 10. ವಾಣಿಜ್ಯ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next