Advertisement

ಕ್ರೀಡಾಕೂಟ ಪದಕ ವಿಜೇತರಿಗೆ ಸರ್ಕಾರಿ ಹುದ್ದೆ

08:50 PM Dec 08, 2022 | Team Udayavani |

ಬೆಂಗಳೂರು: ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದವರಿಗೆ ನೇರ ಸರ್ಕಾರಿ ಹುದ್ದೆಗಳನ್ನು ನೀಡುವ “ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಒಲಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್‌ ಗೇಮ್‌ಗಳಲ್ಲಿ ಪದಕ ವಿಜೇತರಾದ ವ್ಯಕ್ತಿಗಳನ್ನು ಕೆಲವು ಹುದ್ದೆಗಳಿಗೆ ಮಾಡುವ ನೇಮಕಾತಿ) (ವಿಶೇಷ ನಿಯಮಗಳು) 2022′ ಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Advertisement

ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಾದ ಒಲಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಗೇಮ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ನೇರ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಒಂದು ಸಮಿತಿ ಮಾಡಲಾಗುವುದು. ಪದಕ ವಿಜೇತರ ಪಟ್ಟಿಯನ್ನು ಆ ಸಮಿತಿ ಪರಿಶೀಲಿಸಿ ವರದಿ ನೀಡಲಿದೆ. ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ, ಅದರಲ್ಲಿ ಪದಕ ವಿಜೇತರಿಗೆ ಮೀಸಲಾತಿ ನೀಡಲಾಗುತ್ತದೆ ಎಂದು  ವಿವರಿಸಿದರು.

ಒಲಂಪಿಕ್‌ ಹಾಗೂ ಪ್ಯಾರಾಲಿಂಪಿಕ್‌, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ವಿಜೇತ ಪದವೀಧರರಿಗೆ ಗ್ರೂಪ್‌-ಎ ಹಾಗೂ ಏಷ್ಯನ್‌ ಗೇಮ್‌ಗಳಲ್ಲಿ ಪದಕ ವಿಜೇತ ಪದವೀಧರರಿಗೆ ಗ್ರೂಪ್‌ ಬಿ ಹುದ್ದೆಗಳನ್ನು ನೀಡಲಾಗುವುದು. ಈ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಪದವಿಗಿಂತ ಕಡಿಮೆ ಶೈಕ್ಷಣಿಕ ಅರ್ಹತೆ ಇದ್ದವರಿಗೆ ಗ್ರೂಪ್‌ ಸಿ ಮತ್ತು ಡಿ ಹುದ್ದೆಗಳಿಗೆ ಅವಕಾಶ ನೀಡಲಾಗುವುದು. ಶೈಕ್ಷಣಿಕ ಅರ್ಹತೆಯಲ್ಲಿ ಯಾವುದೇ ರಾಜಿ ಇರುವುದಿಲ್ಲ. ಆದರೆ, ವಯೋಮಿತಿಯಲ್ಲಿ 10 ವರ್ಷ ಸಡಿಲಿಕೆ ನೀಡಲಾಗುವುದು ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

ಕುರಿಗಾಹಿ ಯೋಜನೆಗೆ ಅನುಮೋದನೆ: ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘದಿಂದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಅನುಷ್ಠಾನಕ್ಕೆ ಸಂಪುಟ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಇದರಲ್ಲಿ ಒಬ್ಬ ಕುರಿಗಾಹಿಗೆ 20 ಕುರಿ 1 ಮೇಕೆ ಒಳಗೊಂಡಂತೆ 20 ಸಾವಿರ ಕುರಿಗಾಹಿ ಘಟಕಗಳನ್ನು ಪ್ರತಿ ಕುರಿಗಾಹಿಗೆ 1.75 ಲಕ್ಷ ರೂ. ಘಟಕ ವೆಚ್ಚದಂತೆ 354 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.

921 ಬಸ್‌ಗಳ ಖರೀದಿ:

Advertisement

ಕೇಂದ್ರ ಸರ್ಕಾರದ “ಫೇಮ್‌-2′ ಯೋಜನೆಯಡಿ ಸಿಇಎಸ್‌ಎಲ್‌ ಮುಖಾಂತರ 921 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್‌ ಬಸ್‌ಗಳನ್ನು ಜೆ.ಸಿ.ಸಿ. ಮಾದರಿಯಲ್ಲಿ ಕೇಂದ್ರ ಸರ್ಕಾರ ಸಹಾಯಧನದೊಂದಿಗೆ ರಾಜ್ಯ ಸರ್ಕಾರದ ಸಹಾಯಧನ ಉಪಯೋಗಿಸಿಕೊಂಡು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಕಾರ್ಯಾಚರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರತಿ ಕಿ.ಮೀ. 41 ರೂ. ವೆಚ್ಚದಂತೆ 2022-23ನೇ ಸಾಲಿನಲ್ಲಿ ರಾಜ್ಯ ಸರ್ಕಾರಿಂದ 100 ಕೋಟಿ ರೂ. ಒದಗಿಸಲು ಸಚಿವ ಸಂಪುಟ ಒಪ್ಪಿದೆ ಎಂದು ಸಚಿವರು ತಿಳಿಸಿದರು.

ಪ್ರಮುಖ ನಿರ್ಣಯಗಳು:

  • “ಕರ್ನಾಟಕ ಯುವ ನೀತಿ-2022′ ಕರಡುಗೆ ಅನುಮೋದನೆ
  • ರಾಜ್ಯ ಸರ್ಕಾರಿ ನೌಕರರು ಪ್ರತಿ ವರ್ಷದ ಡಿಸೆಂಬರ್‌ ಅಂತ್ಯದ ಬದಲಾಗಿ ಮಾರ್ಚ್‌ ಅಂತ್ಯಕ್ಕೆ ಆಸ್ತಿ ವಿವರಗಳನ್ನು ಸಲ್ಲಿಸಲು ಅವವಕಾಶ. “ಕರ್ನಾಟಕ ಸಿವಿಲ್‌ ಸೇವೆಗಳು (ನಡತೆ) (2ನೇ ತಿದ್ದುಪಡಿ) ನಿಯಮಗಳು-2022’ಕ್ಕೆ ಅನುಮೋದನೆ.
  • ವಿದ್ಯುತ್‌ ಸರಬರಾಜು ಕಂಪನಿಗಳಿಗೆ 2002-03ರಿಂದ 2021-22ರವರೆಗೆ ಬಾಕಿ ಇರುವ 15 ಸಾವಿರ ಕೋಟಿ ರೂ.ಗಳಲ್ಲಿ ಸರ್ಕಾರದಿಂದ 8 ಸಾವಿರ ಕೋಟಿ ರೂ. ನೀಡಲು ಒಪ್ಪಿಗೆ
  • ರಾಜ್ಯದಲ್ಲಿ ಖಾಸಗಿ ಹೂಡಿಕೆ ಆಧಾರದ ಮೇಲೆ ಗ್ರಿಡ್‌ ಬೆಂಬಲಿತ ಸಾವಿರ ಮೆ.ವ್ಯಾ ಪಂಪ್ಡ್ ಹೈಡ್ರೋ ಸ್ಟೋರೇಜ್‌ ವಿದ್ಯುತ್‌ ಯೋಜನೆಯನ್ನು 4 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಕ್ಕೆ ಒಪ್ಪಿಗೆ

39 ಕ್ರಿಮಿನಲ್‌ ಕೇಸ್‌ ವಾಪಸ್‌:

ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾದ 41 ಕ್ರಿಮಿನಲ್‌ ಪ್ರಕರಣಗಳ ಪೈಕಿ ಶಾಸಕರು, ಸಂಸದರ ವಿರುದ್ಧ ಎರಡು ಪ್ರಕರಣಗಳನ್ನು ಹೊರತುಪಡಿಸಿ 39 ಕ್ರಿಮಿನಲ್‌ ಕೇಸ್‌ಗಳನ್ನು ಹಿಂಪಡೆಯಲು ನ್ಯಾಯಾಲಯದ ಅನುಮತಿ ಪಡೆದುಕೊಳ್ಳಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಸಚಿವ ಮಾಧುಸ್ವಾಮಿ ಇದೇ ವೇಳೆ ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next